ಬಂಟ್ವಾಳ: ಸರ್ಕಾರಿ ಪ್ರಾಥಮಿಕ ಶಾಲೆಯ ವರ್ಗಾವಣೆ ಪ್ರಕ್ರಿಯೆ ಬಳಿಕ ಶಿಕ್ಷಣ ಇಲಾಖೆಯ ಕೆಲವೊಂದು ಗೊಂದಲದ ಹೇಳಿಕೆಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಆತಂಕಕ್ಕೀಡು ಮಾಡಿದ್ದು, ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಕ್ರಾಂತಿ ನಡೆಸುತ್ತಿರುವ ಮೂಡುನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶನಿವಾರ ಅಪರ ಜಿಲ್ಲಾಧಿಕಾರಿ ಕುಮಾರ್ ಅವರ ಮೂಲಕ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿತು.
ಬಳಿಕ ಅಪರ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿದ ಕ್ಲಬ್ನ ಪದಾಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅನುಭವಿಸುತ್ತಿರುವ ಎಲ್ಲಾ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಈ ಮನವಿಗೆ ಸ್ಪಂದಿಸಿ 15 ದಿನದೊಳಗಾಗಿ ನ್ಯಾಯನೀಡುವಂತೆ ಆಗ್ರಹಿಸಿದ್ದು ತಪ್ಪಿದ್ದಲ್ಲಿ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ರಾಜ್ಯಾದ್ಯಂತ ಜನಜಾಗೃತಿ ಆಂದೋಲನ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ. ಈ ಸಂದರ್ಭ ಶ್ರೀ ದುರ್ಗಾ ಫ್ರೆಂಡ್ಸ್ಕ್ಲಬ್ನ ಅಧ್ಯಕ್ಷ ಪ್ರಕಾಶ್ ಅಂಚನ್, ಪದಾಧಿಕಾರಿಗಳಾದ ರಾಮಚಂದ್ರಪೂಜಾರಿ ಕರೆಂಕಿ, ವಿನೋದ್ ಕರೆಂಕಿ, ವಿಠಲ ಡಿ.ದೇವಿನಗರ, ಉದಯಕುಮಾರ್ ಕರೆಂಕಿ, ಯಶೋಧರ ರಾಮನಗರ ಹಾಜರಿದ್ದರು.