ಬಂಟ್ವಾಳ: ತಾಲೂಕಿನ ಬಹತೇಕ ಗೂಡಂಗಡಿಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದ್ದು ಇದನ್ನು ತಡೆಗಟ್ಟಲು ಅಬಕಾರಿ ಇಲಾಖೆಯ ಜೊತೆ ಪೋಲೀಸ್ ಇಲಾಖೆ ಕೈಜೋಡಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಸಭೆಯಲ್ಲಿ ಒತ್ತಾಯ ಕೇಳಿ ಬಂತು. ಭಾನುವಾರ ಬಂಟ್ವಾಳ ನಗರ ಠಾಣೆ, ಬಂಟ್ವಾಳ ಗ್ರಾಮಾಂತರ ಠಾಣೆ ಮತ್ತು ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಬಂಟ್ವಾಳ ನಗರ ಠಾಣೆಯಲ್ಲಿ ನಡೆದ ಕುಂದುಕೊರತೆಗಳ ಸಭೆಯ ವಿಷಯ ಪ್ರಸ್ತಾಪಿಸಲಾಯಿತು. ಗಲ್ಲಿ ಗಲ್ಲಿಗಳಲ್ಲಿ ಅಕ್ರಮ ಸಾರಾಯಿ ಮಾರಾಟ ಮಾಡಲಾಗುತ್ತಿದ್ದು ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಾರಾಯಿ ಕುಡಿದ ವ್ಯಕ್ತಿಗಳಿಂದ ತೊಂದರೆಯಾಗುವ ಹೆಚ್ಚಿನ ಅವಕಾಶಗಳಿರುವುದರಿಂದ ಇದನ್ನು ನಿಲ್ಲಿಸಬೇಕು ಎಂದು ಹೇಳಿದರು.


ಈ ಬಗ್ಗೆ ಅಬಕಾರಿ ಇನ್ಸ್ಪೆಕ್ಟರ್ ಸುಬ್ರಮಣ್ಯ ಮಾತನಾಡಿ ಅಂತಹ ಪ್ರಕರಣಗಳು ಕಂಡುಬಂದಲ್ಲಿ ತಮ್ಮ ಗಮನಕ್ಕೆ ತಂದರೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು. ಅನಧಿಕೃತ ಪಾರ್ಕಿಂಗ್ ಮತ್ತು ಅಡ್ಡಾದಿಡ್ಡಿಯಾದ ಪಾರ್ಕಿಂಗ್ ನಿಂದಾಗಿ ಬಿಸಿರೋಡ್ ಮತ್ತು ಬಂಟ್ವಾಳ ಬಡ್ಡಕಟ್ಟೆಯಲ್ಲಿ ಟ್ರಾಫಿಕ್ ಸಮಸ್ಯೆ ಇನ್ನೂ ಕೂಡ ಮುಗಿದಿಲ್ಲ, ಟ್ರಾಫಿಕ್ ಪೋಲೀಸ್ ಇದ್ದರೂ ಅವರಿಗೆ ಅಂತಹವರ ವಿರುದ್ದು ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಭೆಯಲ್ಲಿ ಹೇಳಿದೆ. ಪದೇ ಪದೇ ಪುನಾರಾವರ್ತನೆಯಾಗುತ್ತಿದೆಯಾದರೂ ಇಲ್ಲಿನ ಸಮಸ್ಯೆ ಮುಗಿದಿಲ್ಲ ಎಂದರು. ಈ ಬಗ್ಗೆ ಮಾತನಾಡಿದ ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ ಅವರು ಈಗಾಗಲೇ ಮಂಗಳೂರು ಎಸ್.ಪಿ. ಅವರು ಇಲ್ಲಿನ ಟ್ರಾಫಿಕ್ ಸಮಸ್ಯೆಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಎಲ್ಲಾ ರೀತಿಯ ವ್ಯವಸ್ತೆಗಳನ್ನು ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಸಾದಾರಣ ಮಟ್ಟಿನ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಸಿಗಬಹುದು ಅದಕ್ಕೆ ಎಲ್ಲರ ಸಹಕಾರ ಕೂಡಾ ಅಗತ್ಯವಿದೆ ಎಂದರು. ಪುದು ಸಮೀಪದ ಕುಮ್ಡೇಲು ಎಂಬಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಸ್ಥಳೀಯ ಗ್ರಾ.ಪಂ ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಮದು ದೂರಿದರು. ಅದಕ್ಕೆ ಪೋಲೀಸ್ ಇಲಾಖೆಯಿಂದ ನೋಟೀಸ್ ನೀಡಬೇಕು ಹೇಳಿದರು. ಸಭೆಯಲ್ಲಿ ನಗರ ಠಾಣಾ ಎಸೈ ನಂದಕುಮಾರ್, ಬಂಟ್ವಾಳ ಗ್ರಾಮಾಂತರ ಠಾಣಾ ಎಸೈ ರಕ್ಷಿತ್ ಗೌಡ, ಟ್ರಾಫಿಕ್ ಎಸೈ ಚಂದ್ರಶೇಖರಯ್ಯ ಉಪಸ್ಥಿತರಿದ್ದರು