ಮೂಡುಬಿದಿರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಪಿಐ(ಎಂ)ಮೂಡುಬಿದಿರೆ ಘಟಕದ ವತಿಯಿಂದ ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಯಿತು. ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ವಸಂತ್ ಆಚಾರಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಕೇಂದ್ರ- ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳು ದೇಶಮಾರಕವಾಗಿದೆ ಮಾತ್ರವಲ್ಲ ಅಬಿಔರದ್ಧಿಯಲ್ಲಿ ಹಿನ್ನಡೆಯನ್ನುಂಟು ಮಾಡುತ್ತಿದೆ. ಪರಿವಾರದ ಬೆದರಿಕೆಯಲ್ಲಿ ಬದುಕುವ ಸ್ಥಿತಿ ನಿರ್ಮಾಣ ಆಗಿದೆ. ಆಕಾರದ ಪ್ರಶ್ನೆ, ಗಂಡು-ಹೆಣ್ಣಿನ ಪ್ರಶ್ನೆ, ಮತಾಂತರದ ಹೆಸರಿನಲ್ಲಿ ದೌರ್ಜನ್ಯ ನಡೆಸಲಾಗುತ್ತಿದೆ. ಸಂವಿಧಾನ ಬದ್ಧ ಹಕ್ಕುಗಳನ್ನು ರಕ್ಷಿಸಬೇಕಾದ ಸರ್ಕಾರ, ಸಚಿವರು, ಸಂಸದರು ಬೇಜವಾಬ್ದಾರಿಯಾಗಿ ಮಾತನಾಡುತ್ತಿದ್ದರೂ ಪ್ರಧಾನಿ ಮೌನ ವಹಿಸುತ್ತಿದ್ದಾರೆ. ದೇಶದ ಸ್ವತಂತ್ರ ವಿದೇಶಾಂಗ ನೀತಿಯನ್ನು ಅಮೇರಿಕಾದ ಬಾಲಂಗೋಚಿಯಾಗಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ದೇಶಕ್ಕೆ ಮಾರಕವಾಗಿದೆ ಎಂದರು.

ಪುರಸಭೆಯ ಸದಸ್ಯೆ ರಮಣಿ ಮಾತನಾಡಿ, ಮಹಿಳೆಯರ ಮೇಲೆ ದಾಳಿ ನಡೆಯುತ್ತದೆ. ರಕ್ಷಣೆ ಇಲ್ಲ. ಗೋಹತ್ಯೆ ನಿಷೇಧವನ್ನು ಮುಂದಿಟ್ಟುಕೊಂಡು ರಾಜಕೀಯ ನಡೆಲಾಗುತ್ತಿದೆ ಎಂದು ಆರೋಪಿಸಿದರು.
ವಲಯ ಸಮಿತಿ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಮಾತನಾಡಿ, ಕನಿಷ್ಠ ದಿನಕ್ಕೆ 600 ವೇತನವನ್ನು ನೀಡಲು ಕೇಂದ್ರ- ರಾಜ್ಯ ಸರ್ಕಾರಗಳು ತಯಾರಿಲ್ಲ. 9\11 ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರಕ್ಕೆ ಇಂದಿಗೂ ಸಾಧ್ಯವಾಗಿಲ್ಲ. ಬಂಡವಾಳಶಾಹಿಗಳ ಪರವಾದ ನಿಲುವುಗಳು ಬದಲಾಗಬೇಕು ಎಂದರು. ಸಿಪಿಐ(ಎಂ) ಮುಖಂಡರಾದ ಗಿರಿಜಾ, ಸುಂದರ ಶೆಟ್ಟಿ, ಸಿತಾರಾಮ ಶೆಟ್ಟಿ, ಶಂಕರ ಮೂಡುಬಿದಿರೆ, ಲಕ್ಷ್ಮಿ ಮೊದಲಾದವರಿದ್ದರು.