ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಯಡಿ ಒಟ್ಟು 10700 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

9btl-nalin-1

ಬುಧವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಅಹವಾಲು ಸ್ವೀಕರಿಸಿದ ಬಳಿಕ ಬಿ.ಸಿ.ರೋಡಿನಲ್ಲಿರುವ ಪಕ್ಷ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದ.ಕ. ಜಿಲ್ಲೆಗೆ ಸಿಆರ್ ಎಫ್ ಅನುದಾನದಡಿ 122 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ ಪ್ರಸ್ತುತ ಚರ್ಚೆಯಲ್ಲಿರುವಂತೆ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ 27 ಕೋಟಿ ರೂ ಬಿಡುಗಡೆಯಾಗಿದೆ. ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬರುವ ಈ ಅನುದಾನದಲ್ಲಿ ಶಾಸಕರ ಪ್ರಸ್ತಾವನೆಗೆ ಸಂಸದರ ಒಪ್ಪಿಗೆಯೂ ಅಗತ್ಯವಿದೆ. ಕೇಂದ್ರ ನಿಧಿಯಾಗಿರುವ ಕಾರಣ ಅನುದಾನ ಬಿಡುಗಡೆಯಾದ ಆದೇಶ ಪತ್ರ ನನಗೆ ಬಂದಿದೆ ಎಂದು ಸುದ್ದಿಗಾರರ ಮುಂದೆ ಪತ್ರವನ್ನು ಪ್ರದರ್ಶಿಸಿದರು.

ಅಭಿವೃದ್ಧಿಯಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ತೆಂಗಿನಕಾಯಿಯನ್ನು ಯಾರು ಬೇಕಾದರೂ ಒಡೆಯಬಹುದು ಎಂದು ಲೇವಡಿ ಮಾಡಿದ ಸಂಸದರು ಮತದಾರರಿಗೆ ತಪ್ಪು ಸಂದೇಶ ರವಾನೆಯಾಗದಂತೆ ಪಕ್ಷದ ಕಾರ್ಯಕರ್ತರ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದರು.

ಪುರಸಭೆ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಎರಡನೇ ಹಂತದ ಕುಡಿಯುವ ನೀರಿನ ಕಾಮಗಾರಿಗೂ ಕೇಂದ್ರ ಶೇ.80ರಷ್ಟು ಅನುದಾನ ನೀಡಿದೆ. ರಾಜ್ಯ ಸರ್ಕಾರ ಶೇ.10 ಹಾಗೂ ಪುರಸಭೆ ಶೇ.10 ಅನುದಾನ ಭರಿಸಿದೆ. ಕೊರತೆ ಅನುದಾನವನ್ನು ರಾಜ್ಯ ಸರ್ಕಾರ ಭರಿಸುವ ಒಪ್ಪಿಗೆ ನೀಡಿದೆ ಎಂದರು.

ಆಸ್ಕರ್ ಫೆರ್ನಾಂಡೀಸ್ ಭೂಸಾರಿಗೆ ಸಚಿವರಾಗಿದ್ದಾಗ ಮುಂಗಡವಾಗಿ ಕೆಲ ಕಾಮಗಾರಿಗಳನ್ನು ಮಂಜೂರು ಮಾಡಿದ್ದು, ಅವು ಅನುಷ್ಠಾನಕ್ಕೆ ಬಂದಿವೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಅನುದಾನವನ್ನು ಎನ್ ಡಿಎ ಸರ್ಕಾರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಜೂರಾತಿ ನೀಡಿದ್ದಾರೆ ಎಂದು ಸಂಸದ ತಿಳಿಸಿದರು.

ದೇಶದಲ್ಲೆ ಮೊದಲು:
ಬಿ.ಸಿ.ರೋಡಿನಿಂದ ಅಡ್ಡಹೊಳೆವರೆಗೆ ಸುಮಾರು 63 ಕಿ.ಮೀ. ರಸ್ತೆ 2350 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು ದೇಶದಲ್ಲೇ ಇಷ್ಟು ಉದ್ದದ ರಸ್ತೆ ಕಾಂಕ್ರೀಟ್ ಕಾಮಗಾರಿಯಾಗುವುದು ಇದೇ ಮೊದಲು ಎಂದು ನಳಿನ್ ಹೇಳಿದರು.

ಇದರ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಎಲ್ ಅಂಡ್ ಟಿ ಕಾಮಗಾರಿ ನಡೆಸುತ್ತಿದೆ. ಬಾಳ್ತಿಲದಿಂದ ಕಲ್ಲಡ್ಕವರೆಗಿನ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಉಳಿದಿದ್ದು, ಇಲ್ಲಿ ಫ್ಲೈ ಓವರ್ ನಿರ್ಮಿಸಲಾಗುವುದು ಎಂದರು. ಮೂಲ್ಕಿ-ಪೊಳಲಿ-ಬಿ.ಸಿ.ರೋಡ್-ಮೇಲ್ಕಾರ್ ರಸ್ತೆ ಅಗಲಗೊಳಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಗೊಂಡಿದ್ದು, ಡಿಪಿಎಆರ್ ಹಂತದಲ್ಲಿದೆ. ಇದರ ಶಿಲಾನ್ಯಾಸಕ್ಕೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಆಹ್ವಾನಿಸಲಾಗಿದೆ ಎಂದರು.

ಜಿಲ್ಲೆಗೆ 100 ಜನರಿಕ್ ಔಷಧಾಲಯ
ಕೇಂದ್ರ ಆಯುಷ್ ಇಲಾಖೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ 100 ಜನರಿಕ್ ಔಷಧಾಲಯಗಳು ಮಂಜೂರುಗೊಂಡಿದೆ. ಇದರಿಂದಾಗಿ ಕಡಿಮೆ ಬೆಲೆಯಲ್ಲಿ ಔಷಧಗಳು ಲಭ್ಯವಾಗಲಿವೆ ಎಂದ ಸಂಸದ ನಳಿನ್, ಮುದ್ರಾ ಬ್ಯಾಂಕ್ ಯೋಜನೆಯಡಿ 36500 ಖಾತೆಗಳನ್ನು ತೆರೆಯಲಾಗಿದೆ. 600 ಕೋಟಿ ರೂ. ಸಾಲವನ್ನು ನೀಡಲಾಗಿರುವುದು ದಾಖಲೆ ಎಂದರು. ಪುತ್ತೂರಿನಂತೆ ಬಂಟ್ವಾಳ ರೈಲು ನಿಲ್ದಾಣ ಅಭಿವೃದ್ಧಿ ಪ್ರಗತಿಯಲ್ಲಿದೆ ಎಂದರು.

ಶಿರಾಡಿ ಎರಡನೇ ಹಂತದ ಕಾಮಗಾರಿ ಈ ತಿಂಗಳ ಅಂತ್ಯದಲ್ಲಿ ಆರಂಭಗೊಳ್ಳುವುದು. ರಸ್ತೆ ಬ್ಲಾಕ್ ಮಾಡದಂತೆ ಸಣ್ಣ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.

ಮೇ ಅಂತ್ಯದೊಳಗೆ ರೈಲು ಫಾಸ್ಟ್
ಮಂಗಳೂರು-ಹಾಸನ-ಬೆಂಗಳೂರು ಮಧ್ಯೆ ಓಡುವ ರೈಲು ವೇಗವರ್ಧನೆಗೆ ಇದ್ದ ಅಡೆತಡೆ ನಿವಾರಣೆಯಾಗಿದ್ದು, ಮುಂದಿನ ಮೇ ಅಂತ್ಯದೊಳಗೆ ಹಾಸನದಿಂದ ಬೆಂಗಳೂರಿಗೆ ನೇರಯಾನ ಸಾಧ್ಯವಾಗಲಿದೆ. ಇದರಿಂದ ಮಂಗಳೂರಿಂದ ಬೆಂಗಳೂರಿಗೆ ರೈಲು ಬೇಗ ತಲುಪಲಿದೆ ಎಂದರು.

ಮೋದಿ ಸಾಧನೆಗೆ ಸಂಸದ ಸಂತಸ
ಕಾಳಧನ ಹೊರತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ದಿಢೀರ್ ನಿರ್ಧಾರವನ್ನು ಶ್ಲಾಘಿಸಿದ ಸಂಸದ ನಳಿನ್, ಭೂಸುಧಾರಣೆಯಂತೆ 500 ಮತ್ತು 1000 ನೋಟುಗಳ ನಿಷೇಧಿಸಿರುವ ದಿಟ್ಟ ಹೆಜ್ಜೆಯನ್ನಿಟ್ಟಿರುವುದನ್ನು ದೇಶವೇ ಕೊಂಡಾಡುತ್ತಿದೆ ಎಂದರು. ಈ ಕುರಿತು ಜನರು ತೊಂದರೆಗೆ ಒಳಗಾಗುತ್ತಿದ್ದಾರೆ ಎಂಬ ಅಪಪ್ರಚಾರಕ್ಕೆ ಕಿವಿಗೊಡದಿರುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗಲಿದೆ ಎಂದು ತಜ್ಞರೇ ತಿಳಿಸಿರುವುದಾಗಿ ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಒತ್ತುವರಿ ತೆರವುಗೊಳಿಸಿ, ತಿರುವುಗಳನ್ನು ಸರಿಪಡಿಸಿಸುವ ಮೂಲಕ ಅಭಿವೃದ್ಧಿಗೊಳಿಸಲಾಗುವುದು. ಬಿ.ಸಿ.ರೋಡಿನ ಹದಗೆಟ್ಟ ರಸ್ತೆ ಕಾಂಕ್ರೀಟೀಕರಣಗೊಳಿಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ರಾಜ್ಯ ಸಹ ವಕ್ತಾರೆ ಸುಲೋಚನಾ ಜಿ.ಕೆ.ಭಟ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳೇಪಾಡಿ, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ ಬಂಟ್ವಾಳ, ಮೋನಪ್ಪ ದೇವಸ್ಯ, ಕೋಶಾಧಿಕಾರಿ ದಿನೇಶ್ ಭಂಡಾರಿ, ಪುರಸಭಾ ಸದಸ್ಯೆ ಸುಗುಣ ಕಿಣಿ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *