ಬಂಟ್ವಾಳ: ಬಿಸಿರೋಡ್ ಸರ್ವೀಸ್ ರಸ್ತೆ ಅಗಲೀಕರಣ ಮತ್ತು ರಸ್ತೆ ಬದಿಯ ಅಂಗಡಿಗಳ ತೆರವಿಗೆ ಸೋಮವಾರ ಮೂಹೂರ್ತ ಪಿಕ್ಸ್ ಆಗಿದೆ. ಸಂಸದ ನಳಿನ್ ಕುಮಾರ್ ಕಟೀಲು ಮಂಗಳೂರಿನಲ್ಲಿ ಕರೆದ ಸಭೆಯಲ್ಲಿ ಜಿಲ್ಲಾಧಿಕಾರಿಯಲ್ಲಿ ಈ ಸೂಚನೆ ನೀಡಿದ್ದು, ಅದಕ್ಕೆ ಸಮ್ಮತಿ ಸಿಕ್ಕಿದೆ . ಈಗಾಗಲೇ ಜಿಲ್ಲಾಧಿಕಾರಿ ಜಗದೀಶ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಅಜಿತ್ ಅವರಿಗೆ ನಿರ್ದೇಶನ ನೀಡಿದ್ದು ಸೋಮವಾರ ಅಂಗಡಿಗಳ ತೆರವು ಮತ್ತು ಅದಕ್ಕೂ ಮೊದಲು ಸರ್ವೆ ಮಾಡಿ ಗಡಿ ಗುರುತು ಮಾಡಿ ವರದಿ ಒಪ್ಪಿಸುವಂತೆ ತಿಳಿಸಲಾಗಿದೆ. ಮತ್ತು ಅಂಗಡಿ ಮಾಲಕರಿಗೂ ತಿಳಿಸುವಂತೆ ಹೇಳಲಾಗಿದೆ.
ಜಿಲ್ಲಾಧಿಕಾರಿ ಪೊನ್ನುರಾಜ್ ಅವರ ಅವಧಿಯಲ್ಲಿ ಇಲ್ಲಿನ ಸರ್ವಿಸ್ ರಸ್ತೆ ಮತ್ತು ಕಟ್ಟಡಗಳ ತೆರವು ಕಾರ್ಯ ಒಂದು ದಿನ ನಡೆದಿದೆ ಬಿಟ್ಟರೆ ಈವರೆಗೆ ಯಾವ ಅಧಿಕಾರಿಯೂ ರಸ್ತೆಗೆ ಇಳಿದಿರಲಿಲ್ಲ. ಸರ್ವೀಸ್ ರಸ್ತೆಯ ಸಮಸ್ಯೆಯನ್ನು ಕೇಳುವವರಿಲ್ಲ, ಚರಂಡಿ ವ್ಯವಸ್ಥೆ ಸರಿಯಾಗಿಲ್ಲದೆ ಮಳೆ ಗಾಲದಲ್ಲಿ ಬಿಸಿರೋಡಿನ ಪರಿಸ್ಥಿತಿ ಅದೋಗತಿ… ಬಿಸಿರೋಡ್ – ಹಾಸನ ಚತುಷ್ಪತ ಕಾಮಗಾರಿಯ ಹಿನ್ನಲೆಯಲ್ಲಿ ಇಲ್ಲಿನ ರಸ್ತೆಯ ಕಾಮಗಾರಿ ಈಗಾಗಲೇ ಮುಗಿಯಬೇಕಿತ್ತು. ಸುಮಾರು ಹತ್ತು ವರ್ಷಗಳಿಂದ ಇಲ್ಲಿನ ರಸ್ತೆಯ ಬದಿಯ ಅಂಗಡಿಗಳ ತೆರವು ಮೆಸ್ಕಾಂ ವಿದ್ಯುತ್ ಕಂಬಗಳ ತೆರವು, ಮತ್ತು ಪುರಸಭೆಯ ಪೈಪ್ ಲೈನ್‍ಗಳ ತೆರವು ಆಗಿಲ್ಲ. ಅ ನಂತರ ನಡೆದ ಪ್ರತಿ ಸಭೆಯಲ್ಲೂ ಇಲಾಖೆಗಳು ಇನ್ನೋಬ್ಬರ ಮೇಲೆ ಕೈ ತೋರಿಸಿ ತಪ್ಪಿಸಿಕೊಳ್ಳುತ್ತಿದ್ದರು. ಈ ಬಾರಿ ಮಾತ್ರ ಜಿಲ್ಲಾಧಿಕಾರಿ ಮತ್ತು ಸಂಸದರ ಖಡಕ್ ಆದೇಶಕ್ಕೆ ಬೆಲೆ ಸಿಗುತ್ತಾ ಎನ್ನುವ ಕುತೋಹಲ ಸಾರ್ವಜನಿಕರದ್ದು.
ಆರಂಭದಲ್ಲಿಯೇ ಇಲ್ಲಿನ ಎಲ್ಲಾ ಅಂಗಡಿ ಮಾಲಕರಿಗೂ ಪರಿಹಾರ ನೀಡಲಾಗಿತ್ತು. ಆದರೂ ಅಂಗಡಿ ಮಾಲಕರು ಮಾತ್ರ ಕಟ್ಟಡ ತೆರವು ಮಾಡದೆ ಇನ್ನು ಕೂಡಾ ಕಾಮಗಾರಿಗೆ ತೊಡಕು ಮಾಡುತ್ತಿದ್ದಾರೆ ಎನ್ನುವ ಆರೋಪ ಇತ್ತೀಚೆಗೆ ಪುರಸಭೆಯಲ್ಲಿ ನಡೆದ ಜಿಲ್ಲಾಧಿಕಾರಿ ಸಭೆಯಲ್ಲಿ ಸದಸ್ಯರಿಂದಲೇ ಆರೋಪ ಕೇಳಿ ಬಂತು. ಅ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸರಿಯಾಗಿ ಸರ್ವೇ ಮಾಡಿ ವರದಿ ನೀಡಿ ಬಳಿಕ ಕಟ್ಟಡಗಳ ತೆರವು ಮಾಡುವಂತೆ ಸೂಚನೆ ನೀಡಿದ್ದರು. ಆದರೆ ಅವರ ಮಾತನ್ನು ಅಧಿಕಾರಿಗಳು ಗಾಳಿಗೆ ತೂರಿದ್ದರು. ಮತ್ತೆ ಸಂಸದರ ಸಭೆಯಲ್ಲಿ ಈ ಪ್ರಸ್ತಾಪ ಬಂದಿದ್ದು ಸೋಮವಾರ ಕಟ್ಟಡ ತೆರವು ಮಾಡುವ ಬಗ್ಗೆ ಜಲ್ಲಾಧಿಕಾರಿ ಮಾತು ಕೊಟ್ಟಿದ್ದಾರೆ.
ಇಷ್ಟು ವರ್ಷಗಳಿಂದ ಆಗದ ರಸ್ತೆ ಅಗಲೀಕರಣ ಆಗುತ್ತಾ , ಸರ್ವೀಸ್ ರಸ್ತೆ ಯ ಸಮಸ್ಯೆ ಪರಿಹಾರ ಆಗುತ್ತಾ, ಸರ್ವಿಸ್ ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ನಿರ್ಮಾಣ ಆಗುತ್ತಾ, ವಾಹನ ನಿಲುಗಡೆಗೆ ಪ್ರತ್ಯೇಕ ಜಾಗ ಸಿಗುತ್ತಾ ಹೀಗೆ ಸಾರ್ವಜನಿಕರ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ ? ರಸ್ತೆ ಅಗಲೀಕರಣಕ್ಕೆ ತೊಡಕಾಗುವ ಅಂಗಡಿಗಳನ್ನು ತೆರವುಗೊಳಿಸುವಂತೆ ಇಲ್ಲಿನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರೂ ಕೂಡಾ ಅದು ಕಾರ್ಯರೋಪಕ್ಕೆ ಬಂದಿರಲಿಲ್ಲ. ಇನ್ನಾದರೂ ಬರುತ್ತಾ ಎಂದು ಕಾದುನೋಡೋಣ…
