ಬಂಟ್ವಾಳ, : ಕಲ್ಲಡ್ಕ ಸಮೀಪದ ಕೆ.ಸಿ.ರೋಡ್ ರೈಲ್ವೆ ಕ್ರಾಸಿಂಗ್ ಬಳಿ ರೈಲ್ವೆ ಅಂಡರ್ ಬ್ರಿಡ್ಜ್ (ಕೆಳಸೇತುವೆ), ಗೋಳ್ತಮಜಲು ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗುತ್ತಿದ್ದು ಇನ್ನು ಎರಡು ತಿಂಗಳೊಳಗೆ ಕಾಮಗಾರಿ ಸಂಪೂರ್ಣ ಮುಗಿಯುವ ಸಾಧ್ಯತೆ ಇದೆ. ತದನಂತರ ರೈಲು ಸಂಚಾರದ ಸಂದರ್ಭದಲ್ಲಿ ವಾಹನ ಸವಾರರು, ಪಾದಚಾರಿಗಳು ಕಾದು ನಿಲ್ಲುವ ಸ್ಥಿತಿಗೆ ಮುಕ್ತಿ ದೊರಕಲಿದೆ.
ಮಂಗಳೂರು – ಹಾಸನ ರೈಲುಮಾರ್ಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಗತ್ಯವಿರುವ ಆರು ಸ್ಥಳಗಳಲ್ಲಿ ರೈಲ್ವೆ ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಅನುಕೂಲವಾಗುವಂತೆ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ವತಿಯಿಂದ ಪಿ.ರಂಗರಾಜು ನಿರ್ಮಾಣ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಅದರಂತೆ ಜಿಲ್ಲೆಯ ನೆಟ್ಟಣ, ಎಡಮಂಗಲ, ಕೆ.ಸಿ.ರೋಡ್, ಕೋಡಿಂಬಾಳ, ಗೋಳ್ತಮಜಲು, ಮುರ ಎಂಬಲ್ಲಿನ ರೈಲ್ವೆ ಕ್ರಾಸಿಂಗ್ ಪಕ್ಕದಲ್ಲಿ ಕೆಲಸೇತುವೆ ಅಥವಾ ಮೇಲ್ಸೇತುವೆಯನ್ನು ಮಾಡಲಾಗುತ್ತಿದೆ.

1

IMAG1794

IMAG1798

IMAG1801
ಕಲ್ಲಡ್ಕ ಕೆ.ಸಿ.ರೋಡ್ – ಅಮ್ಟೂರು ರಸ್ತೆಯ ಮಧ್ಯದಲ್ಲಿರುವ ರೈಲು ಹಳಿ ಕ್ರಾಸಿಂಗ್‍ನಲ್ಲಿ ಟ್ರಾಫಿಕ್ ಸಲೀಸಾಗಿ ಸಾಗಲು ಅನುಕೂಲವಾಗುವಂತೆ ಹಾಗೂ ಸಂಭವನೀಯ ಅಪಾಯಗಳನ್ನು ತಪ್ಪಿಸುವ ಸಲುವಾಗಿ ಈ ಕೆಲಸ ನಿರ್ವಹಿಸಲಾಗುತ್ತಿದೆ. ಈಗಿನ ರಸ್ತೆಯಿಂದ ಸುಮಾರು 150 ಮೀಟರ್ ದೂರದಲ್ಲಿ ಈ ಕೆಳಸೇತುವೆ ಇದೆ. ಕಲ್ಲಡ್ಕ ಕಡೆಗೆ ಬರುವವರು ಎಡಕ್ಕೆ ಹಾಗೂ ಅಮ್ಟೂರು ಕಡೆ ಹೋಗುವವರು ಬಲಕ್ಕೆ ತಿರುಗಿ ಅಲ್ಲಿರುವ ಕೆಳಸೇತುವೆಯಲ್ಲಿ ಹಾದು ಮುಂದೆ ಸಾಗಬೇಕಾಗಿದೆ. ಕೆಳ ಸೇತುವೆಯ ಕಾಮಗಾರಿ ಮುಗಿದ ಬಳಿಕ ಈಗಿರುವ ರೈಲ್ವೆ ಕ್ರಾಸಿಂಗ್ ಶಾಶ್ವತವಾಗಿ ಬಂದ್ ಆಗಲಿದೆ.
ಕೆ.ಸಿ.ರೋಡಿನಲ್ಲಿ ನಿರ್ಮಾಣವಾಗಿರುವ ಕೆಳಸೇತುವೆ ಹದಿನೆಂಟು ಅಡಿ ಎತ್ತರ, ಹದಿನೈದು ಅಡಿ ಅಗಲ, ಹನ್ನೆರಡು ಮೀಟರ್ ಉದ್ದ ಇದ್ದು ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಆಗದಂತೆ ನಿರ್ಮಾಣ ಮಾಡಲಾಗುತ್ತಿದೆ. ಕೆಳಸೇತುವೆ ನಿರ್ಮಾಣಗೊಂಡ ಬಳಿಕ ಲೆವೆಲ್ ಕ್ರಾಸಿಂಗ್ ಬಂದ್ ಮಾಡಲಾಗುತ್ತದೆ. ಅಲ್ಲಿ ಯಾವುದೇ ವಾಹನ ಸಂಚಾರ ಇರುವುದಿಲ್ಲ. ಹೀಗಾಗಿ ಪ್ರಯಾಣಿಕರು ಕಡ್ಡಾಯವಾಗಿ ಅಂಡರ್ ಬ್ರಿಡ್ಜ್ ಮೂಲಕವೇ ಸಾಗಬೇಕಾದ ಅನಿವಾರ್ಯತೆ ಇದೆ. ಈ ಕಾರಣದಿಂದ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಂಡು ರಸ್ತೆಯನ್ನೂ ಸದೃಢವನ್ನಾಗಿಸಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕೆಳಸೇತುವೆಗಾಗಿ ಕಾಂಕ್ರೀಟ್ ಬಾಕ್ಸ್ ಅಳವಡಿಸುವ ಕಾಮಗಾರಿ ಈಗ ನಡೆದಿದೆ. ಕಳೆದ ನಾಲ್ಕು ವರ್ಷಗಳಿಂದ ರೈಲ್ವೆ ಯಾತ್ರಿ ಸಂಘ 16 ಲೆವೆಲ್ ಕ್ರಾಸ್ ಗಳಿಗೆ ಪರ್ಯಾಯ ರಸ್ತೆಗೆ ಬೇಡಿಕೆ ಇಟ್ಟಿತ್ತು. ಪುತ್ತೂರು ಸಮೀಪ ಮುರದಲ್ಲಿ ರೈಲ್ವೆ ಲೆವೆಲ್ ಕ್ರಾಸ್ ಗೇಟ್ 107ಕ್ಕೆ ಪರ್ಯಾಯವಾಗಿ ನಿರಂತರ ರಸ್ತೆ, ವಾಹನ ಸಂಚಾರಕ್ಕೆ ಅಡಚಣೆ ಆಗದಂತೆ ಮೇಲ್ಸೇತುವೆ ನಿರ್ಮಿಸುವ ಗರ್ಡರ್ಸ್ ಅಳವಡಿಸುವ ಕಾಮಗಾರಿಯೂ ಭರದಿಂದ ಸಾಗಿದೆ. ಬುಧವಾರ ಬೆಳಗ್ಗೆ ಎರಡು ಬೃಹತ್ ಕ್ರೇನ್‍ಗಳಲ್ಲಿ ಈ ಕಾರ್ಯವನ್ನು ಮಾಡಲಾಯಿತು ಎಂದು ಸುದರ್ಶನ ಪುತ್ತೂರು ಮಾಹಿತಿ ನೀಡಿದ್ದಾರೆ.
ದಶಕಗಳ ಹಿಂದೆ ಆಸುಪಾಸಿನ ಜನರಿಗೆ ಅದರಲ್ಲೂ ಸಣ್ಣಪುಟ್ಟ ಉದ್ಯೋಗವನ್ನು ಮಂಗಳೂರಲ್ಲಿ ನಿರ್ವಹಿಸುತ್ತಿದ್ದವರಿಗೆ ಕಲ್ಲಡ್ಕ ಸ್ಟೇಶನ್‍ನಲ್ಲಿ ಪ್ಯಾಸೆಂಜರ್ ರೈಲು ನಿಲುಗಡೆಯಾಗುತ್ತಿರುವುದು ಅನುಕೂಲವಾಗುತ್ತಿತ್ತು. ಕ್ರಮೇಣ ಹಲವಾರು ತಾಂತ್ರಿಕ ಕಾರಣಗಳಿಂದ ರೈಲು ನಿಲುಗಡೆಯೇ ನಿಂತಿತು. ಈಗ ಕಲ್ಲಡ್ಕ ಸ್ಟೇಶನ್‍ನ ಬೋರ್ಡು ಮತ್ತು ಪ್ಲಾಟ್ ಫಾರ್ಮ್ ಗತಕಾಲದ ಇತಿಹಾಸವನ್ನು ಸಾರುತ್ತಿದೆ.

ಬಾಕ್ಸ್…
ಪ್ರಸ್ತುತ ರೈಲ್ವೆ ಕ್ರಾಸಿಂಗ್ ರಸ್ತೆಗಿಂತ ಕೆಳ ಸೇತುವೆ ರಸ್ತೆ 18 ಅಡಿ ತಗ್ಗಿನಲ್ಲಿದೆ. ಮಳೆಗಾಲದಲ್ಲಿ ಸೇತುವೆಯ ಅಡಿಯಲ್ಲಿ ನೀರು ನಿಲ್ಲುವ ಸಾಧ್ಯತೆ ಇದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದಿದ್ದರೆ ಮಳೆಗಾಲ ಉದ್ದಕ್ಕೂ ಸಾರ್ವಜನಿಕರು ಸಂಕಷ್ಟ ಅನುಭವಿಸಬೇಕಾಗಿ ಬರಬಹುದು. ಈ ಬಗ್ಗೆ ರೈಲ್ವೆ ಅಧಿಕಾರಿಳನ್ನು ಮಾತನಾಡಿಸಿದಾಗ ಸರ್ವ ಋತುವಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಸಂಪೂರ್ಣವಾಗಿ ಸುಸಜ್ಜಿತವಾಗಿ ಕೆಳ ಸೇತುವೆಯನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಇದು ಎಷ್ಟು ಸತ್ಯ ಎಷ್ಟು ಮಿತ್ಯ ಎಂಬುದನ್ನು ಕಾದು ನೋಡಬೇಕಾಗಿದೆ.

By suddi9

Leave a Reply

Your email address will not be published. Required fields are marked *