ಬಂಟ್ವಾಳ: ಪರಿಸರದ ಬಗ್ಗೆ ಕಾಳಜಿ ಪ್ರತಿಯೊಬ್ಬರಲ್ಲೂ ಬಂದಾಗ ಪರಿಸರದ ಉಳಿವಿನ ಬಗ್ಗೆ ಚಿಂತಿಸಲು ಸಾಧ್ಯ. ಒಂದು ಮರವನ್ನು ಕಡಿದಾಗ ನಾಲ್ಕು ಮರವನ್ನು ನೆಡುವ ಪ್ರವೃತ್ತಿ ನಮ್ಮಲ್ಲಿ ಬಂದಾಗ ಪರಿಸರದ ಅಸಮತೋಲನಕ್ಕೆ ನಿಯಂತ್ರಣ ಸಾಧ್ಯವಿದೆ ಎಂದು ಪೆರ್ಲ ಬಜಕೊಡ್ಲುವಿನ ಅಧ್ಯಾಪಕ ರಮೇಶ್‍ರವರು ಹೇಳಿದರು.ಮುರುವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪರಿಸರದ ಕುರಿತಾಗಿ ಉಪನ್ಯಾಸ ನೀಡಿದ ಅವರು, ಅಳಿವಿನ ಅಂಚಿನಲ್ಲಿರುವ ಸಸಿಗಳ ಹಾಗೂ ಮರಗಳ ಸಂರಕ್ಷಣೆ ಮನುಷ್ಯನಿಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮುರುವ ಪಂಚಾಯತ್ ಅಧ್ಯಕ್ಷರಾದ ರಾಜೇಶ್ ಬಾಳೆಕಲ್ಲು ಮಾತನಾಡುತ್ತಾ ಉದ್ಯೋಗ ಖಾತ್ರಿ ಯೋಜನೆ ಮೂಲಕ ಪ್ರತಿಯೊಬ್ಬರ ಜಾಗಗಳಲ್ಲಿ ಸಸಿ ನಾಟಿ ಮಾಡಬೇಕು. ಜಲ ಸಂರಕ್ಷಣೆಗೆ ಒತ್ತು ನೀಡುವುದರಿಂದ ಬೇಸಿಗೆಯಲ್ಲಿ ಉಂಟಾಗುವ ನೀರಿನ ಅಭಾವವನ್ನು ತಪ್ಪಿಸಬಹುದು ಎಂದರು.ಶಾಲಾ ಮುಖ್ಯೋಪಾದ್ಯಾಯರಾದ ದಯಾನಂದ ನಾೈಕ್ ಮಣ್ಣಿನಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗಿದೆ ಸಾವಯವ ಆಹಾರ ಪದಾರ್ಥಿಗಳನ್ನು ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.
ಒಕ್ಕೂಟದ ಅಧ್ಯಕ್ಷ ನವೀನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಜ್ಞಾನವಿಕಾಸ ಸದಸ್ಯರಿಗೆ ಪರಿಸರ ಗೀತೆ ಹಾಗೂ ಗಿಡಮೂಲಿಕೆಗಳ ಸಂಗ್ರಹದ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಕೇಪು ವಲಯದ ಮೇಲ್ವಿಚಾರಕ ಸಂದೇಶ್ ಯೋಜನೆಯ ಕಾರ್ಯಕ್ರಮಗಳ ವಿವರ ನೀಡಿದರು. ಸೇವಾಪ್ರತಿನಿಧಿ ಪರಮೇಶ್ವರ್ ನಿರೂಪಿಸಿ, ಜಯಂತಿ ಸ್ವಾಗತಿಸಿದರು ಚಂದ್ರಾವತಿ ವಂದಿಸಿದರು.