ಬಂಟ್ವಾಳ : ಬೆಂಜನಪದವಿನ ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ಬಿ.ಇ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿದ್ಯಾರ್ಥಿಗಳು ತಮ್ಮ ವಿವಿಧ ಪ್ರಾಜೆಕ್ಟ್ ಮೂಲಕ ಸಾಧನೆಯನ್ನು ಮೆರೆದಿದ್ದಾರೆ.
ಎಲೆಕ್ಟ್ರಾನಿಕ್ಸ್ ತೊಟ್ಟಿಲು, ವಿದ್ಯುತ್ ತಂತಿಗಳ ಲೋಪ ಪತ್ತೆ ಸಾಧನ, ಎಲ್.ಪಿ.ಜಿ. ಸುರಕ್ಷೆ, ಮನೆ ನಿರ್ವಹಣೆಗಾಗಿ ಇಂಟರ್ನೆಟ್, ಹೀಗೊಂದು ಸ್ಮಾರ್ಟ್ ಸ್ಟಿಕ್, ಟ್ರೀ ಕ್ಲೈಂಬರ್ ಮೊದಲಾದ ಸಾಧನಗಳನ್ನು ರಚಿಸಿ ಗಮನ ಸೆಳೆದಿದ್ದಾರೆ.
ಎಲೆಕ್ಟ್ರಾನಿಕ್ಸ್ ತೊಟ್ಟಿಲು : ಗಂಡ ಹೆಂಡತಿ ಇಬ್ಬರೂ ಉದ್ಯೋಗಿಗಳಾಗಿದ್ದರೆ ತಮ್ಮ ಎಳೆಯ ಮಕ್ಕಳನ್ನು ನೋಡಿಕೊಳ್ಳುವುದೇ ಒಂದು ಸವಾಲು. ಇಂತಹದ್ದೊಂದು ಸಕಾಲಿಕ ಸಮಸ್ಯೆಗೆ ತಂತ್ರಜ್ಞಾನದ ನೆರವಿನಿಂದ ಖುಷಿಕೊಡುವ ರೀತಿಯಲ್ಲಿ ಇಲ್ಲಿ ರೂಪಿಸಲಾಗಿರುವ ತೊಟ್ಟಿಲು ಸ್ವಯಂ ತೂಗಬಲ್ಲದು. ತೊಟ್ಟಿಲಲ್ಲಿರುವ ಮಗು ಅತ್ತಾಗ ಅಳವಡಿಸಲಾಗಿರುವ ಮೈಕ್ರೋ ಫೋನ್ ಮೂಲಕ ಗ್ರಹಿಸಿ ತೊಟ್ಟಿಲು ತೂಗಲಾರಂಭಿಸುತ್ತದೆ. ಇದೇ ವೇಳೆ ಜಿ.ಎಸ್.ಎಂ ಮೊಡ್ಯೂಲ್ ಬಳಸಿ ಮಗುವಿನ ಹಾಸಿಗೆ ಒದ್ದೆಯಾದರೆ ಹೆತ್ತವರ ಮೊಬೈಲ್‍ಗೆ ಸಂದೇಶ ರವಾನೆಯಾಗುವ ವ್ಯವಸ್ಥೆಯೂ ಇಲ್ಲಿದೆ. ಮಗು ಅತ್ತಾಗಲೆಲ್ಲ ತೊಟ್ಟಿಲು ತೂಗುವುದರ ಜತೆಗೆ ನಿಗದಿತ ಅವಧಿಯೊಳಗೆ ಮಗು ಅಳು ನಿಲ್ಲಿಸದೇ ಹೋದಾಗಲೂ ಮೊಬೈಲ್ ಮೂಲಕ ಹೆತ್ತವರಿಗೆ ಗಮನ ಕೊಡಿ ಎನ್ನುವ ಸಂದೇಶ ಹೋಗುತ್ತದೆ. ತೊಟ್ಟಿಲಿಗೆ ಅಳವಡಿಸಲಾಗಿರುವ ವೆಬ್ ಕ್ಯಾಮ್ ಮೂಲಕ ಹೆತ್ತವರೂ ಮಗು ಏನು ಮಾಡುತ್ತಿದೆ ಎನ್ನುವುದನ್ನು ಗಮನಿಸುವಂತೆ ಸೌಲಭ್ಯ ಕಲ್ಪಿಸಲಾಗಿದೆ.

Intrenet based Technology LPG suraksha Power Lora System Smart Stick Project (1) Smart Stick Project Tree Climber

ಕಾಲೇಜಿನ ಸಹ ಪ್ರಾಧ್ಯಾಪಕಿ ಜಯಶ್ರೀ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ವರದರಾಜ ಭಟ್, ಸುಪರ್ಣಾ ಪೈ, ಸ್ನೇಹಾ ಎಚ್. ಭಟ್, ವರುಣ್ ಶೆಣೈ ಈ ತೊಟ್ಟಿಲನ್ನು ರೂಪಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಸುಬ್ರಹ್ಮಣ್ಯ ಭಟ್ ಈ ಸಾಧನವನ್ನು ರಚಿಸಿದ್ದಾರೆ.
ವಿದ್ಯುತ್ ತಂತಿಗಳ ಲೋಪ ಪತ್ತೆ ಸಾಧನ: ವಿದ್ಯುತ್ ಪ್ರಸರಣ ಮತ್ತು ವಿತರಣೆ ಅದೊಂದು ದೊಡ್ಡ ಜಾಲ. ಇದರ ನಿರ್ವಹಣೆಯೇ ದೊಡ್ಡ ಸವಾಲು. ಬೆಳೆಯುತ್ತಿರುವ ಬೇಡಿಕೆಗಳ ನಡುವೆ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ವಿದ್ಯುತ್ ಪೂರೈಕೆ ಮಾಡುವಾಗ ಸಂರಕ್ಷಣಾ ವ್ಯವಸ್ಥೆಯ ಅಗತ್ಯವೂ ಇದೆ. ಆಕಸ್ಮಿಕ ಘಟನೆಗಳು, ನೈಸರ್ಗಿಕ ಪ್ರಕೋಪಗಳಿಂದಾಗಿ ವಿದ್ಯುತ್ ತಂತಿಗಳಲ್ಲಿ ದೋಷಗಳು ಕಂಡು ಬರುವುದಿದೆ. ಈ ದೋಷಗಳನ್ನು ಕೂಡಲೇ ಪತ್ತೆ ಹಚ್ಚುವ ಮೂಲಕ ಶ್ರಮ,ಸಮಯ, ವಿದ್ಯುತ್ ನಷ್ಟ ಉಳಿಸಿ ದೋಷಗಳಿಗೆ ಪರಿಹಾರ ಹುಡುಕುವಲ್ಲಿ ವಿದ್ಯಾರ್ಥಿಗಳೇ ರೂಪಿಸಿರುವ ಲೋರಾ ಆಧಾರಿತ ವ್ಯವಸ್ಥೆ ಉಪಯುಕ್ತವೆನಿಸಿದೆ.
ಈ ವ್ಯವಸ್ಥೆಯಲ್ಲಿ ವಿದ್ಯುತ್ ತಂತಿಗಳ ಸ್ಥಿತಿಗತಿಯನ್ನು ಯಾವುದೇ ಸ್ಥಳದಿಂದ ನೆಟ್ವರ್ಕ್ ಸರ್ವರ್ ಮೂಲಕ ಪರಿಶೀಲಿಸಬಹುದಾಗಿದೆ. ಇಲ್ಲಿ ಫಾಲ್ಟ್ ಡಿಟೆಕ್ಟರ್ ವ್ಯವಸ್ಥೆ ಲೋಪ ಇರುವ ಸ್ಥಳ ಮತ್ತು ಈ ಬಗ್ಗೆ ನಿಖರ ಮಾಹಿತಿಯನ್ನು ನೀಡುತ್ತದೆ.
ಕಾಲೇಜಿನ ಸಹ ಪ್ರಾಧ್ಯಾಪಕಿ ಕಾವ್ಯ ಎ.ಡಿ.ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಪ್ರೀತಮ್ ಐವನ್ ಡಿಸೋಜಾ, ನವಮಿ ಕಿಣಿ, ವೆಂಕಟೇಶ ಪ್ರಭು, ಮಾಧವ ಶೆಣೈ ಮೆಸ್ಕಾಂ ತಾಂತ್ರಿಕ ವಿಭಾಗದ ಸಚಿನ್ ಅವರ ಸಲಹೆಯೊಂದಿಗೆ ಈ ಪ್ರಾಜೆಕ್ಟ್ ರೂಪಿಸಿದ್ದಾರೆ.
ಎಲ್.ಪಿ.ಜಿ. ಸುರಕ್ಷೆ : ಮನೆ ಮತ್ತು ಕೆಲಸದ ಏರಿಯಾಗಳಲ್ಲಿ ಸುರಕ್ಷೆ ಇಂದಿನ ಪ್ರಮುಖ ಆದ್ಯತೆಯಾಗಿದೆ. ಮಿತ ವ್ಯಯದಲ್ಲಿ ಮನೆ ಮತ್ತು ಕಛೇರಿಗಳಲ್ಲಿ ಎಲ್.ಪಿ.ಜಿ. ಅನಿಲ ಸೋರುವಿಕೆಯ ಕುರಿತು ನಿಖರ ಹಾಗೂ ಸುರಕ್ಷಾ ಮಾಹಿತಿಯನ್ನು ನೀಡುವ ಸಾಧನವನ್ನು ಎಂಜಿನಿಯರಿಂಗ್ ಪ್ರಾಜೆಕ್ಟ್ ಮೂಲಕ ಇಲ್ಲಿ ವಿದ್ಯಾರ್ಥಿಗಳು ರೂಪಿಸಿದ್ದಾರೆ. ಅನಿಲ ಸೋರಿಕೆಯ ಪತ್ತೆ, ಸಂಭವನೀಯ ಅಪಾಯದ ಸಮಯ, ತಡೆಗೆ ಕ್ರಮ ಈ ವ್ಯವಸ್ಥೆಯಲ್ಲಿದೆ. ಎಂಕ್ಯೂ ಸೆನ್ಸಾರ್ 6 ಬಳಸಿ ರೂಪಿಸಲಾಗಿರುವ ಈ ಸಾಧನದಲ್ಲಿ ಗ್ಯಾಸ್ ಸಿಲಿಂಡರ್ ತೂಕ ತಿಳಿಸುವ ಮೂಲಕ ಸಿಲಿಂಡರ್ ಬದಲಾವಣೆಯ ಸೂಚನೆ ಸಿಗುತ್ತದೆ.
ಕಾಲೇಜಿನ ಸಹ ಪ್ರಾಧ್ಯಾಪಕ ಅನುಪ್ ಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಮನು ವೆಂಕಟೇಶ್, ಪೂಜಾ ಎಸ್, ನಿಶಾಂತ್ ಜೊಯೆಲ್ ಮಾರ್ಟಿಸ್, ನಿಶ್ಮಿತಾ ನಾೈಕ್ ಈ ಪ್ರಾಜೆಕ್ಟ್ ರೂಪಿಸಿದ್ದಾರೆ.
ಮನೆ ನಿರ್ವಹಣೆಗಾಗಿ ಇಂಟರ್ನೆಟ್ : ಅಂತರ್ಜಾಲದ ಪ್ರಭಾವದಿಂದಾಗಿ ಇಂದು ಎಲ್ಲವೂ ಸ್ಮಾರ್ಟ್ ಆಗುತ್ತಿವೆ. ಅಭಿವೃದ್ಧಿ ಹೊಂದುತ್ತಿರುವ ಸಮಾಜದಲ್ಲಿ ಎಲ್ಲರೂ ತಮ್ಮ ಜೀವನ ಶೈಲಿಯನ್ನು ಆಧುನಿಕರಿಸಲು ಹಾತೊರೆಯುತ್ತಿದ್ದಾರೆ. ಅದೆಷ್ಟೋ ದೂರದಲ್ಲಿದ್ದರೂ ಯಾವುದೋ ಮೂಲೆಯಲ್ಲಿ ಕುಳಿತು ಮನೆಯ ಅಗತ್ಯ ಸೌಲಭ್ಯಗಳ ನಿಯಂತ್ರಣ ಮಾಡುವುದೆಂದರೆ ಅದು ಸ್ವಾಗತಾರ್ಹವೇ. ಇಂಟರ್ನೆಟ್ ಬೇಸ್ಡ್ ಟೆಕ್ನಾಲಜಿಯ ಈ ಸಾಧನವನ್ನು ಎಂಜಿನಿಯರಿಂಗ್ ಪ್ರಾಜೆಕ್ಟ್ ಮೂಲಕ ಇಲ್ಲಿ ವಿದ್ಯಾರ್ಥಿಗಳು ರೂಪಿಸಿದ್ದಾರೆ. ಮನೆಯ ತಾಪಮಾನ, ಟಾಂಕಿಯಲ್ಲಿರುವ ನೀರಿನ ಪ್ರಮಾಣ, ಮನೆಯೊಳಗೆ ಎಲೆಕ್ಟ್ರಾನಿಕ್ ಸ್ಥಿತಿಯ ವೀಕ್ಷಣೆ, ಅಡುಗೆ ಅನಿಲ ಸೋರಿಕೆಯಾದಲ್ಲಿ ಸಂದೇಶ ಹೀಗೆ ಅಂತರ್ಜಾಲ ಮತ್ತು ಮೊಬೈಲ್ ಎಪ್ಲಿಕೇಶನ್ ಬಳಸಿಕೊಳ್ಳುವ ವ್ಯವಸ್ಥೆಯಿರುವ ಈ ಪ್ರಾಜೆಕ್ಟನ್ನು ಕಾಲೇಜಿನ ಸಹ ಪ್ರಾಧ್ಯಾಪಕ ಪದ್ಮಹಾಸ ಎಂ.ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶ್ರೇಯಸ್ ನಾಯಕ್ ಸುನಿಲ್, ಸುಪ್ರೀತ್ ಕುವೆತ್ತೋಡಿ, ಅಮಿತ್ ಕುಮಾರ್ ರೂಪಿಸಿದ್ದಾರೆ.
ಹೀಗೊಂದು ಸ್ಮಾರ್ಟ್ ಸ್ಟಿಕ್ : ವಯಸ್ಸಾದವರ ಆರೋಗ್ಯದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಸ್ಮಾರ್ಟ್ ಸ್ಟಿಕ್‍ನ ಪ್ರಾಜೆಕ್ಟ್ ರೂಪುಗೊಂಡಿದೆ. ನಾಡಿಮಿಡಿತವನ್ನು ಗ್ರಹಿಸುವ ಸಂವೇದಕಗಳು ಇಲ್ಲಿನ ವಾಕಿಂಗ್ ಸ್ಟಿಕ್ ಹಿಡಿಯ ಭಾಗದಲ್ಲಿವೆ. ಹೀಗೆ ಪತ್ತೆಯಾದ ನಾಡಿಮಿಡಿತ ಬ್ಲೂಟೂತ್ ಮಾಡ್ಯೂಲ್ ಮೂಲಕ ನಿರಂತರ ಆ್ಯಪ್‍ಗೆ ರವಾನೆಯಾಗುತ್ತವೆ. ಅಸಹಜತೆಗಳ ಸಹಿತ ರೀಡಿಂಗ್ ಸಂಬಂಧಪಟ್ಟವರ ಮೊಬೈಲ್‍ಗೆ ಸಂದೇಶ ರೂಪದಲ್ಲಿ ಸಿಗುತ್ತದೆ. ಒಂದು ಮೀಟರ್ ಅಂತರದಲ್ಲಿ ಎದುರಾಗುವ ಅಡೆತಡೆಗಳ ಬಗ್ಗೆಯೂ ಬೀಪ್ ಸೌಂಡ್ ಮೂಲಕ ಈ ವಾಕಿಂಗ್ ಸ್ಟಿಕ್ ಎಚ್ಚರಿಕೆಯ ಸಂದೇಶ ನೀಡುವಂತೆ ರೂಪಿಸಲಾಗಿರುವ ಈ ಪ್ರಾಜೆಕ್ಟನ್ನು ಕಾಲೇಜಿನ ಸಹ ಪ್ರಾಧ್ಯಾಪಕಿ ಅಶ್ವಿನಿ ವಿ. ಹೊಳ್ಳ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶರಲ್ ವೇಗಸ್. ಶರಣ್ಯ ಎಸ್, ಸುಮನಾ ನಾಯಕ್, ವಿದ್ಯಾಲಕ್ಷ್ಮೀ ಕಾಮತ್ ರೂಪಿಸಿದ್ದಾರೆ.
ಟ್ರೀ ಕ್ಲೈಂಬರ್ : ಕಾರ್ಮಿಕರ ಕೊರತೆಯ ಇಂದಿನ ದಿನಗಳಲ್ಲಿ ಅಡಿಕೆ ಮರ ಏರುವ ಯಂತ್ರವನ್ನು ಸುಧಾರಿತ ರೀತಿಯಲ್ಲಿ ಇಲ್ಲಿ ಪ್ರಾಜೆಕ್ಟ್ ಮೂಲಕ ರೂಪಿಸಲಾಗಿದೆ. ಮೈಕ್ರೋ ಕಂಟ್ರೋಲರ್ ಮೂಲಕ ತಿರುಗುವ ಮೋಟಾರು ರಾಟೆಯಿಂದ ಯಂತ್ರವನ್ನು ಮರದ ಮೇಲಕ್ಕೇರಿಸುತ್ತದೆ. ಮರಕ್ಕೆ ಯಂತ್ರ ಸುರಕ್ಷತೆಗಾಗಿ ಲಾಕ್ ಮಾಡುವ ವ್ಯವಸ್ಥೆಯೂ ಇದೆ. ಅಲ್ಲಿ ಬ್ಲೇಡ್ ಬಳಸಿಕೊಂಡು ಅಡಿಕೆಗಳನ್ನು ಕೊಯ್ಯುವ ಬಗ್ಗೆಯೂ ಸೌಲಭ್ಯವಿದೆ. ರೋಬೋಟ್‍ಗೆ ಅವಕಾಶ ಮತ್ತು ಕೀಟನಾಶಕಗಳ ಸಿಂಪಡಣೆಗೆ ಈ ವಿನ್ಯಾಸವನ್ನು ಅಭಿವೃದ್ಧಿ ಪಡಿಸಬಹುದಾಗಿದೆ.
ಕಾಲೇಜಿನ ಸಹ ಪ್ರಾಧ್ಯಾಪಕರಾದ ವಾಯುಸುತ, ಅಶ್ವಿನ್ ಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಶ್ವಿನ್ ಪ್ರಬು, ದರ್ಶನ್, ಹರೀಶ್ ಮತ್ತು ಗಣೇಶ್ ಈ ಪ್ರಾಜೆಕ್ಟನ್ನು ರೂಪಿಸಿದ್ದಾರೆ.

By suddi9

Leave a Reply

Your email address will not be published. Required fields are marked *