ವಿಟ್ಲ : ಸಂಪತ್ತನ್ನು ಸಂಗ್ರಹಿಸುವ ಬದಲು, ಮಕ್ಕಳನ್ನೇ ಸಂಪತ್ತನ್ನಾಗಿ ಮಾಡಿದಾಗ ಅವರೇ ನಮ್ಮ ಕಷ್ಟಕಾಲದಲ್ಲಿ ನೆರವಾಗುತ್ತಾರೆ. ಮಕ್ಕಳಿಗೆ ಬಾಲ್ಯದಲ್ಲಿ ಸಂಸ್ಕಾರಯುತ ಶಿಕ್ಷಣ ನೀಡಿದಾಗ ಸುಸಂಸ್ಕೃತ ವ್ಯಕ್ತಿಯಾಗಿ ಬೆಳೆಯುತ್ತಾರೆ. ಎಲ್ಲಾ ದೇವಸ್ಥಾನ, ಮಠ ಮಂದಿರಗಳು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳೊಮದಿಗೆ ಸಮಾಜಮುಖಿ ಕಾರ್ಯಗಳನ್ನು ನಡೆಸಬೇಕು ಎಂದು ಮಾಣಿಲ ಶ್ರೀ ಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. 
ಅವರು ಭಾನುವಾರ ಮಾಣಿಲ ಶ್ರೀಧಾಮದ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ನಡೆಯುತ್ತಿರುವ 48 ದಿನಗಳ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಶಾಲೆ ಕಾಲೇಜುಗಳ ಕ್ಯಾಂಪಸ್ನಲ್ಲಿ ಡ್ರಗ್ಸ್ ಜಾಲ ವ್ಯಾಪಕವಾಗಿ ಹರಡುತ್ತಿದ್ದು ಪೋಷಕರು ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ವಲರಮಹಾಲಕ್ಷ್ಮೀ ಪೂಜೆ ಕೇವಲ 48 ದಿನ ಮಾತ್ರ ಆಚರಿಸುವ ಪೂಜೆಯಲ್ಲ, ಅದು ಜೀವನಪೂರ್ತಿ ಅನುಷ್ಠಾನ ಮಾಡಬಹುದಾದ ವೃತಾಚರಣೆಯಾಗಿದೆ ಎಂದು ತಿಳಿಸಿದರು.
ಶಾಸಕಿ ಶಕುಂತಳ ಶೆಟ್ಟಿ ಮಾತನಾಡಿ ಭಾರತೀಯ ಸಂಸ್ಕøತಿಯನ್ನು ಪಾಶ್ಚ್ಯಾತ್ಯರು ಕೂಡ ಅನುಕರಿಸುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಸಂಸ್ಕøತಿಯನ್ನು ನಾವೇ ಮರೆಯುವುದು ಸರಿಯಲ್ಲ. ಮಹಿಳೆ ತೊಡುವ ತಿಲಕ, ಆಭರಣಗಳಿಗೆ ತನ್ನದೇ ಆದ ಮಹತ್ವವಿದೆ. ಫ್ಯಾಶನ್ ನೆಪದಲ್ಲಿ ಅರೆಬರೆ ಬಟ್ಟೆಗಳನ್ನು ಧರಿಸುವ ಮಕ್ಕಳ ಬಗ್ಗೆ ಪೋಷಕರು ನಿಗಾ ವಹಿಸಬೇಕಾಗಿದೆ ಎಂದರು.ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಮಾಣಿಲ ಶ್ರೀ ಮಹಾಲಕ್ಷ್ಮೀ ಸೇವಾ ಸಮಿತಿಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಶ್ರೀ ಲಕ್ಷ್ಮೀ ಪೂಜೆ, ಶ್ರೀನಾಗಾದೇವರ ಪೂಜೆ, ಗೋಮಾತಾ ಪೂಜೆ, ಬಾಲಭೋಜನ, ಕನಕಧಾರಾ ಯಾಗ, ನವಗ್ರಹ ಶಾಂತಿ, ಸಾಮೂಹಿಕ ಕುಂಕುಮಾರ್ಚನೆ, ವಿಷ್ಣುಸಹಸ್ರನಾಮ ಪಠಣ, ಶ್ರೀ ದುರ್ಗಾ ಪೂಜೆ, ಆಶ್ಲೇಷಾ ಬಲಿ, ಮಹಾಪೂಜೆ, ವಾಯನದಾನ, ಅನ್ನಪ್ರಸಾದ ಸೇವೆ ನಡೆಯಿತು.
ಸಮಿತಿಯ ಉಪಾಧ್ಯಕ್ಷರಾದ ಪ್ರಭಾಕರ ಪ್ರಭು, ಕೃಷ್ಣ ಶ್ಯಾಮ್, ಪುರುಷೋತ್ತಮ ಸಾಲ್ಯಾನ್ ಶಂಭೂರು, ರಾಜ್ಕುಮಾರ್, ಕಾರ್ಯದರ್ಶಿ ಕೇಶವ ಅಂತರ ಸಂಘಟನಾ ಕಾರ್ಯದರ್ಶಿ ಸಂದೀಪ್ ಸಾಲ್ಯಾನ್, ಕೋಶಾಧಿಕಾರಿ ದಾಮೋದರ ಮಾಸ್ತರ್, ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ವನಿತಾ ವಿ ಶೆಟ್ಟಿ, ರಾಜೇಶ್ ಬಾಳೆಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಟ್ರಸ್ಟಿಗಳಾದ ಜಯರಾಜ್ ಪ್ರಕಾಶ್, ಚಂದ್ರಶೇಖರ್ ತೇಜ ಹಾಜರಿದ್ದರು.
ದಾಮೋದರ ಬಿ.ಎಂ.ಸ್ವಾಗತಿಸಿ, ಉಮೇಶ್ ಪಿ.ಕೆ. ಪ್ರಾಸ್ತವನೆಗೈದರು. ಸಮಿತಿಯ ಅಧ್ಯಕ್ಷ ಮಚ್ಚೇಂದ್ರ ಸಾಲ್ಯಾನ್ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.