ಬಂಟ್ವಾಳ: ನಮ್ಮ ಹಿರಿಯರ ತ್ಯಾಗ ಬಲಿದಾನ ಹಾಗೂ ಒಗ್ಗಟ್ಟಿನ ಫಲವಾಗಿ ಇಂದು ದೇಶ ಸ್ವತಂತ್ರಗೊಂಡಿದೆ. ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಯುವಜನಾಂಗದ ಜವಾಬ್ದಾರಿಯಾಗಿದೆ ಎಂದು ಸುಜೀರು ಪ್ರೌಢಶಾಲಾ ಎಸ್‍ಡಿಎಂಸಿ ಅಧ್ಯಕ್ಷ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಹೇಳಿದರು.
ಸುಜೀರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಬ್ರಿಟಿಷರು ಈ ದೇಶದಲ್ಲಿ ಆಡಳಿತ ನಡೆಸಲು ಒಡೆದು ಆಳುವ ನೀತಿಯನ್ನು ಅನುಸರಿಸಿದ್ದರು. ಆದರೆ ನಮ್ಮ ಹಿರಿಯರು ಅದಕ್ಕೆ ತಲೆಬಾಗದೆ ಒಗ್ಗಟ್ಟಾಗಿ ದೇಶದ ಹೋರಾಟದಲ್ಲಿ ತೊಡಗಿದ್ದರು. ಆದರೆ ಇಂದು ಜಾತಿ ಧರ್ಮದ ಹೆಸರಿನಲ್ಲಿ ಒಡೆದು ಆಳುವ ನೀತಿಯನ್ನು ಅನುಸರಿಸಲಾಗುತ್ತಿದೆ. ಆದರೆ ವಿದ್ಯಾರ್ಥಿಗಳು ಇದೆಲ್ಲವನ್ನು ಮೀರಿ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳ ಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ತಾ.ಪಂ. ಸದಸ್ಯೆ ಪದ್ಮಶ್ರೀ, ಪುದು ಗ್ರಾ.ಪಂ. ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಸದಸ್ಯ ರಮ್ಲಾನ್, ಮನೋರಮಾ ಹಿರಿಯರಾದ ಎಫ್. ಎ. ಖಾದರ್, ಸಾಹಿತಿ ಮಹಮ್ಮದ್ ಮಾರಿಪಳ್ಳ, ಜಬ್ಬಾರ್ ಮಾರಿಪಳ್ಳ, ಎಸ್ ಡಿ ಎಂ ಸಿ ಸದಸ್ಯರಾದ ಕಿಶೋರ್, ಜುಬೈರ್, ಬಶೀರ್, ಮಜೀದ್ ಫರಂಗಿಪೇಟೆ, ಅಬೂಬಕ್ಕರ್ ಫರಂಗಿಪೇಟೆ, ಇಕ್ಬಾಲ್ ಮಾರಿಪಳ್ಳ, ರಫೀಕ್, ಮಾಲತಿ, ಇಂದಿರ, ಹುಸೈನ್ ಮತ್ತಿತರರು ಹಾಜರಿದ್ದರು. ಈ ಸಂದರ್ಭ ವಿದ್ಯಾರ್ಥಿಗಳು ಹಾಗೂ ಗಣ್ಯರು ಸ್ವಚ್ಚತಾ ಪ್ರತಿಜ್ಞೆ ಸ್ವೀಕರಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಶೂ ವಿತರಣ ಕಾರ್ಯಕ್ರಮ ನಡೆಯಿತು.
ಮುಖ್ಯ ಶಿಕ್ಷಕಿ ಶಶಿಮಂಗಳ ಸ್ವಾಗತಿಸಿದರು, ಜ್ಯೋತಿರಾವ್ ವಂದಿಸಿದರು. ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ: ಜಿ.ಪಂ.ಮಾಜಿ ಸದಸ್ಯ ಉಮ್ಮರ್‍ಫಾರೂಕ್ ಮಾತನಾಡಿದರು.