
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ಪ್ರಕರಣ ಸಂಬಂಧ ಅಕ್ರಮ ಶಸ್ತ್ರಾಸ್ತ್ರ ಪೂರೈಕೆಯಡಿ ಬಂಧತನಾಗಿರುವ ನವೀನ್ ಅಲಿಯಾಸ್ ಹೊಟ್ಟೆ ಮಂಜನನ್ನು ಮತ್ತೆ ಐದು ದಿನಗಳ ಕಾಲ ಎಸ್ ಐಟಿ ವಶಕ್ಕೆ ನೀಡಿ ಮೂರನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.
ಎಸ್ ಐಟಿ ಅಧಿಕಾರಿಗಳು ಆರೋಪಿಗೆ ಮಂಪರು ಪರೀಕ್ಷೆ ನಡೆಸಲು ಮನವಿ ಮಾಡಿದ್ದಾರೆ. ಮಂಪರು ಪರೀಕ್ಷೆ ನಡೆಸಬೇಕೆ ಅಥವಾ ಬೇಡವೆ ಎಂಬುವುದರ ಬಗ್ಗೆ ಮಾರ್ಚ 15 ರಂದು ಕೋರ್ಟ್ ಆದೇಶ ನೀಡಲಿದೆ.
ಬೆಳಗಾವಿ, ಗೋವಾ, ಕೊಡೆಕಿನಾಲ್ ಸೇರಿದಂತೆ ವಿವಿಧೆಡೆ ಆರೋಪಿಯನ್ನು ಕರೆದುಕೊಂಡು ಹೋಗಿ ವಿಚಾರಣೆ ನಡೆಸಬೇಕಿದೆ. ಅದಕ್ಕಾಗಿ ಮತ್ತೆ ಐದು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಎಸ್ ಐಟಿ ಅಧಿಕಾರಿಗಳ ಮನವಿಗೆ ಒಪ್ಪಿದ ಮೂರನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಮತ್ತೆ ಐದು ದಿನಗಳ ವರೆಗೆ ಆರೋಪಿಯನ್ನು ಎಸ್ ಐಟಿ ವಶಕ್ಕೆ ನೀಡಿದೆ.
ಆರೋಪಿ ನವೀನ್ ನ್ಯಾಯಲಯದಲ್ಲಿ ಹೇಳಿಕೆ ನೀಡಿ ಮಂಪರು ಪರೀಕ್ಷೆಗೆ ನಿರಾಕರಿಸಿದ್ದಾನೆ ಎನ್ನಲಾಗಿದೆ. ಎಸ್ಐಟಿ ಅಧಿಕಾರಿಗಳು ನವೀನ್ ವಿಚಾರಣೆ ವೇಳೆ ನೀಡಿದ ಹೇಳಿಕೆಗಳ ವಿಡಿಯೋ ತೋರಿಸಿ ಆತನೇ ಮಂಪರು ಪರೀಕ್ಷೆಗೆ ಒಪ್ಪಿಕೊಂಡಿದ್ದಾನೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ವೇಳೆ ಆರೋಪಿ ನವೀನ್ ಉಲ್ಟಾ ಹಡೆದು ಆಗ ನಾನು ಮಂಪರು ಪರೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಅಧಿಕಾರಿಗಳು ನನಗೆ ಚಿತ್ರ ಹಿಂಸೆ ನೀಡಿ ಹೊಡೆದಿದ್ದಾರೆ ಎಂದು ನ್ಯಾಯಾಧೀಶರ ಮುಂದೆ ಆರೋಪಿಸಿದ್ದಾನೆ.