ಗುರುಪುರ-ಕೈಕಂಬ : ಮಾ. 20ರಂದು ನಗರಕ್ಕೆ ಆಗಮಿಸಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳೂರು ನೆಹರೂ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದು, ರ್ಯಾಲಿಗೆ ಗುರುಪುರ ಬ್ಲಾಕಿನಿಂದ ಕನಿಷ್ಠ 5,000ಕ್ಕೂ ಅಧಿಕ ಮಂದಿಯನ್ನು ಕರೆದುಕೊಂಡು ಹೋಗುವ ಕುರಿತು ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ನಿರ್ಧರಿಸಿತು.
ಗುರುಪುರ ಕೈಕಂಬದಲ್ಲಿರುವ ಬ್ಲಾಕ್ ಸಮಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಬಳಿಕ ಮಾತನಾಡಿದ ಸುರೇಂದ್ರ ಕಂಬಳಿ, ಗುರುಪುರ ಬ್ಲಾಕಿನಿಂದ ಜನರನ್ನು ಕರೆದುಕೊಂಡು ಹೋಗಲು ಅಗತ್ಯಕ್ಕನುಗಣವಾಗಿ ಬಸ್ಸುಗಳ ವ್ಯವಸ್ಥೆ ಮಾಡಲಾಗುವುದು. ಅಂದು ಮಧ್ಯಾಹ್ನ 2 ಗಂಟೆಗೆ ಕೈಕಂಬದಿಂದ ಎಲ್ಲ ಬಸ್ಸುಗಳು ಹೊರಡಲಿದ್ದು, ಬಿಕರ್ಣಕಟ್ಟೆ ಕೈಕಂಬದಲ್ಲಿ ಒಟ್ಟಾಗಿ ನೆಹರೂ ಮೈದಾನದತ್ತ ಸಾಗಲಿವೆ. ಪ್ರತಿಯೊಬ್ಬ ಕಾರ್ಯಕರ್ತನೂ ಕನಿಷ್ಠ ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿಯನ್ನು ಕರೆದುಕೊಂಡು ಬರಬೇಕು. ಇದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ಸೂಚನೆಯೂ ಆಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಪಂ ಸದಸ್ಯ ಯು. ಪಿ. ಇಬ್ರಾಹೀಂ, ಕೆಡಿಬಿ ಸದಸ್ಯ ಜಿ. ಉಂಞಿ, ಡಿಸಿಸಿ ವಕ್ತಾರ ಗಣೇಶ್ ಪೂಜಾರಿ, ಬ್ಲಾಕ್ ಪದಾಧಿಕಾರಿಗಳಾದ ಬಾಷಾ, ಹರೀಶ್ ಭಂಡಾರಿ, ಜಯಶೀಲ, ಸತ್ತರ್, ಕೃಷ್ಣ ಅಮೀನ್, ವಿನಯ ಕುಮಾರ್ ಶೆಟ್ಟಿ, ಲ್ಯಾನ್ಸಿ ರಾಬರ್ಟ್ ಪಾಯಸ್, ಸದಾಶಿವ ಶೆಟ್ಟಿ, ಕೆಪಿಸಿಸಿ ಸದಸ್ಯ ಪೃಥ್ವೀರಾಜ್, ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ. ಎಂ. ಉದಯ ಭಟ್, ಸದಸ್ಯರಾದ ಉಮೈ ಬಾನು, ಜಯಲಕ್ಷ್ಮೀ, ಗ್ಲಾಡಿಸ್ ಕ್ವಾಡ್ರಸ್, ಶೋಭಾ ಮೋಹಿನಿ ಮೊದಲಾದವರು ಇದ್ದರು.
