ಗುರುಪುರ: ಗುರುಪುರ ಮತ್ತು ವಾಮಂಜೂರು ಆಸುಪಾಸಿನ ಮತಗಟ್ಟೆಗಳಲ್ಲಿ ಬೆಳಗ್ಗೆ ಮತದಾರರ ಸಂಖ್ಯೆ ಇಳಿಮುಖವಾಗಿದ್ದರೆ, ಮಧ್ಯಾಹ್ನದ ಹೊತ್ತಿಗೆ ಬಿರುಸಿನ ಮತದಾನ ನಡೆದಿದೆ. ಮತದಾರರ ಸಂಖ್ಯೆ ಅಧಿಕಗೊಂಡಿದ್ದ ಮತಗಟ್ಟೆಗಳಲ್ಲೂ ಒಂದೇ ಮತಯಂತ್ರವಿದ್ದ ಹಾಗೂ ಪಾರದರ್ಶಕ ವ್ಯವಸ್ಥೆಯಿಂದ ಮತದಾನ ನಿಧಾನಗತಿಯಲ್ಲಿ ಮುಂದುವರಿಯಿತು.
ಗಮನ ಸೆಳೆದ ಅಂಶ:
1.ಜನಸಂಘದಲ್ಲಿ ನಾಯಕರಾಗಿದ್ದ, ಎ ಕೆ ಸುಬ್ಬಯ್ಯರ ಆಪ್ತ ಹಿರಿಯ ಮುಖಂಡ ಮಹಾಬಲ ಶೆಟ್ಟಿ ಗುರುಪುರ(ಬಾಗಮಂಡಲ) ಹಾಗೂ ಅವರ ಪತ್ನಿ ಸುಶೀಲಾ ಶೆಟ್ಟಿ ಮತ ಚಲಾಯಿಸಿದರು.
2.ಮತಗಟ್ಟೆಗೆ 100 ಮೀಟರ್ ಅಂತರದಲ್ಲಿ ಯಾವುದೇ ವಾಹನಗಳ ನಿಲುಗಡೆ ನಿಷೇಧಿಸಲಾಗಿದ್ದರೂ, ಇಲ್ಲಿನ ಬಹುತೇಕ ಮತಗಟ್ಟೆಗಳ ಬಳಿ ಮತದಾರರ ಇಳಿಸುವ/ಹತ್ತಿಸಿಕೊಳ್ಳುವ ವಾಹನಗಳು ಕಂಡು ಬಂದವು.
3.ಅಡ್ಡೂರು ಪ್ರದೇಶದಲ್ಲಿ ಗಲಭೆಯ ವದಂತಿ ಹಬ್ಬಿದ್ದು, ತಕ್ಷಣ ಭದ್ರತಾ ಪಡೆ ಧಾವಿಸಿದೆ. ಅಲ್ಲಿ ಮತದಾನಕ್ಕೆ ಯಾವುದೇ ಅಡ್ಡಿ-ಆತಂಕ ಆಗಿಲ್ಲ ಎಂದು ಚುನಾವಣಾ ಕಚೇರಿಯ ಸೆಕ್ಟರ್ ಅಧಿಕಾರಿ ಗಂಗಾಧರ ಹೇಳಿದ್ದಾರೆ.
4.ಗುರುಪುರ ಮತಗಟ್ಟೆಯ ಎದುರು ಮತದಾರರ ಓಲೈಸಲು ಪ್ರಯತ್ನಿಸುತ್ತಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯುಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
5.ಮಠದಗುಡ್ಡೆಯ ವಯೋವೃದ್ಧರಾದ ಹಸನಬ್ಬ(89) ಮತ್ತು ಕಾರಮೊಗರಿನ ಶಾಂಭವಿ ಆಳ್ವ(95) ಮನೆಯವರ ಸಹಾಯದಿಂದ ಅತಿ ಹುರುಪಿನಿಂದ ಮತ ಚಲಾಯಿಸಿದರು.
6.ನಡೆದು ದಣಿದಿದ್ದ ಪಡ್ಡಾಯಿಪದವಿನ ಮಗ್ದೆಲಿನ್ ಅಲ್ಬುಕರ್ಕ್ಗೆ ಮತಗಟ್ಟೆಯ ಹೊರಗಡೆ ಇದ್ದ ಭದ್ರತಾ ಪಡೆಯ ಸಿಬ್ಬಂದಿ ತನ್ನ ಕುರ್ಚಿ ಬಿಟ್ಟುಕೊಟ್ಟರು.
ನಾನು ಇದೇ ಪ್ರಥಮ ಬಾರಿ ಮತ ಚಲಾಯಿಸಿದೆ. ಮತದಾನ ಮಾಡಿದ ಬಳಿಕ ನನ್ನ ಮತ ಆಯ್ದ ಅಭ್ಯರ್ಥಿಗೆ ಬಿದ್ದ ದೃಶ್ಯ ಕಂಡು ಬಂತು. ಚುನಾವಣಾ ಆಯೋಗದ ಹೊಸ ವಿಧಾನ ಪಾರದರ್ಶಕತೆಗೆ ಸಾಕ್ಷ್ಯಿಯಾಗಿದೆ. ಇದರಲ್ಲಿ ತಪ್ಪು ಹುಡುಕುವುದು ಸಮಂಜಸವಲ್ಲ ಎಂದು ನನಗನ್ನಿಸುವುದಿಲ್ಲ ಎಂದು ಗುರುಪುರದ ಪ್ರಥಮ ಬಾರಿಯ ಮತದಾರ, ಫರ್ನಿಚರ್ ಕೆಲಸಗಾರ ಸೂರ್ಯ ಬೆಳ್ಳಿಬೆಟ್ಟು ಅಭಿಪ್ರಾಯಪಟ್ಟರು.




