ವಾಮಂಜೂರು: `ಆಟಿಡೊಂಜಿ ದಿನ’ದಂದು ಪ್ರದರ್ಶಿಸುವ, ಇಲ್ಲವೇ ಉಣಬಡಿಸುವ ಸೊತ್ತುಗಳು ಯುವ ಪೀಳಿಗೆಗೆ ಹೊಸದಾಗಿದ್ದರೂ, ಹಿಂದೆ ಆಟಿಯಲ್ಲಿ ನಾವು ಈ ಸೊತ್ತು ತಿಂದಿದ್ದೇವೆ. ಕರ್ನಾಟಕ ತುಳು ಸಾಹಿತ್ಯ ಪರಿಷತ್ತು ಅಧ್ಯಕ್ಷನಾಗಿದ್ದಾಗ ಇಂತಹ ಆಚರಣೆಗಳಿಗೆ ಹೆಚ್ಚು ಅನುದಾನ ನೀಡಿದ್ದೇನೆ ಎಂದು ಮೂಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಪಿಲಿಕುಳ ನಿಸರ್ಗಧಾಮದ ಗುತ್ತಿನ ಮನೆಯಲ್ಲಿ ಭಾನುವಾರ ಆಯೋಜಿಸಲಾದ `ಆಟಿ ಕೂಟ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಕೋಟ್ಯಾನ್ ಮಾತನಾಡುತ್ತ, ಮೃಗಾಲಯ, ಪಕ್ಷಿಧಾಮ ನೋಡಬೇಕಿದ್ದರೆ ಹಿಂದೆ ಮೈಸೂರು, ಬೆಂಗಳೂರಿನಂತಹ ಪ್ರದೇಶಗಳಿಗೆ ಹೋಗಬೇಕಿತ್ತು. ಈಗ ನಮ್ಮ ಹತ್ತಿರದ ಪಿಲಿಕುಳದಲ್ಲಿ ದೇಶದಲ್ಲೇ ಅತಿ ದೊಡ್ಡದಾದ `ನಿಸರ್ಗಧಾಮ’ವಿದೆ. ಇಲ್ಲಿ ತುಳುನಾಡಿನ ಇತಿಹಾಸ ಪ್ರದರ್ಶಿಸುವ ಗುತ್ತಿನ ಮನೆಯೂ ಇದೆ. ಇದು ಇಂದಿನ ಪೀಳಿಗೆಗೆ ತೋರಿಸುವ ಪ್ರಯತ್ನವಾಗಿದೆ ಎಂದರು.
ಆಟಿ ಕೂಟ ಉದ್ಘಾಟನೆ ಸಂದರ್ಭದಲ್ಲಿ ಕು. ಸ್ವಸ್ತಿಶ್ರೀಯಿಂದ ಯಕ್ಷ ನೃತ್ಯ ಹಾಗೂ ಜಿಲ್ಲೆಯ ಪ್ರಸಿದ್ಧ ಯಕ್ಷ ಕಲಾವಿದರಿಂದ `ಯಕ್ಷ ನೃತ್ಯ-ಹಾಸ್ಯ ವೈಭವ’ ಕಾರ್ಯಕ್ರಮ ಜರುಗಿತು.
ಮಂಗಳೂರು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ ಮತ್ತು ಜಯಲಕ್ಷ್ಮೀ ಮುಂದಾಳತ್ವದಲ್ಲಿ ಮಹಿಳಾ ಸಂಘಗಳ ಸದಸ್ಯೆಯರು ನೆರೆದವರಿಗೆ ಆಟಿ ತಿಂಗಳಲ್ಲಿ ತಯಾರಿಸುತ್ತಿದ್ದ ಪ್ರಕೃತಿದತ್ತ ತಿಂಡಿ-ತಿನಸು ಬಡಿಸಿದರು. ಪೆಲಕಾಯಿದ ಗಟ್ಟಿ(ಹಲಸಿನ ಗಟ್ಟಿ), ಗೆಂಡದ ಅಡ್ಯೆ, ಗುರಿಯಪ್ಪ, ತೆಕ್ಕರೆ ಅಡ್ಯೆ(ಮುಳ್ಳುಸೌತೆ), ಮಂಜಲ್ ಇರೆತ್ತ ಗಟ್ಟಿ(ಹಳದಿ ಗಿಡದೆಲೆ), ಗಾರಿಗೆ, ತಜಂಕ್ದ್ ಅಂಬಡೆ, ಅರಿತ ಉಂಡೆ(ಅಕ್ಕಿ ಉಂಡೆ), ಪತ್ರೋಡೆ ಇವೇ ಮೊದಲಾದ ತಿನಸುಗಳು ಕಂಡು ಬಂದವು.
ಗುತ್ತಿನ ಮನೆ ಮುಂದೆ ತುಳುನಾಡಿನಲ್ಲಿ ಅಡುಗೆ ತಯಾರಿಸಲು ಬಳಸುವ ಬಳ್ಳಿ ಮತ್ತು ನಾರುಗಳಿಂದ ಸಿದ್ಧಪಡಿಸಿದ ಕುಡ್ಪು, ತಡ್ಪೆ, ಬಟ್ಟಿ, ಸೂಪು ಮೊದಲಾದ ಸೊತ್ತುಗಳ ಮಾರಾಟ-ಪ್ರದರ್ಶನವಿತ್ತು. ಪಕ್ಕದಲ್ಲಿ ಮಾಂಡೋವಿ ಕಾರು ಪ್ರದರ್ಶನ, ಲಕ್ಕಿ ಕೂಪನ್ ವ್ಯವಸ್ಥೆ ಮಾಡಲಾಗಿತ್ತು.
ಪಿಲಿಕುಳ ಗುತ್ತಿನ ಮನೆಯಲ್ಲಿ ಆಟಿ ಕೂಟ ಪ್ರತಿ ವರ್ಷವೂ ನಡೆಯುತ್ತಿದೆ. ಇದರಲ್ಲಿ ಮಹಿಳೆಯರು ಹೆಚ್ಚು ಸಕ್ರಿಯರಾಗಿರುತ್ತಾರೆ. ತುಳುನಾಡ ಆಚರಣೆಯ ಒಂದು ಭಾಗದ ಪ್ರದರ್ಶನ ಇದಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಹೇಳಿದರು. ಇವರೊಂದಿಗೆ ಪಿಳಿಕುಳ ನಿಸರ್ಗಧಾಮದ ಕಾರ್ಯನಿರ್ವಹಣಾ ನಿರ್ದೇಶಕಿ ಮೇಘನಾ, ದೇವಾಡಿಗ, ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಹಾಗೂ ಅಧಿಕಾರಿ ವರ್ಗದವರಿದ್ದರು.
