ಕೈಕಂಬ : ನೀರುಮಾರ್ಗ ಪಂಚಾಯತ್ ವ್ಯಾಪ್ತಿಯ ತಾರಿಗುಡ್ಡೆ ಎಂಬಲ್ಲಿ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬವೊಂದಕ್ಕೆ ಬಿಲ್ಲವ ಸಮಾಜದ ಮುಖಂಡ, ಸಮಾಜಸೇವಕ ಮೋಹನದಾಸ ಬಂಗೇರ ಉಚಿತವಾಗಿ ನಿರ್ಮಿಸಿದ ಮನೆಯನ್ನು ಭಾನುವಾರ ಆ ಕುಟುಂಬಕ್ಕೆ ಹಸ್ತಾಂತರಿಸಿದರು.
ಹಲವು ವರ್ಷದಿಂದ ಸರ್ಕಾರಿ ಸೈಟಿನಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದ ನಾಗೇಶ್ ಪೂಜಾರಿ, ಪತ್ನಿ ಸರಸ್ವತಿ, ಪುತ್ರ ಭರತ್ರಾಜ್ ಅವರಿಗೆ ಸ್ಥಳೀಯ ಪಂಚಾಯತ್ ನೆರವಿಗೆ ಹಿಂದೇಟು ಹಾಕಿದಾಗ ವಾಮಂಜೂರು ಬಿಲ್ಲವ ಸೇವಾ ಸಮಾಜದ ಮಾಜಿ ಅಧ್ಯಕ್ಷರೂ ಆಗಿರುವ ಬಂಗೇರರು ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿದರು. ಪ್ರಸಕ್ತ ಕೋವಿಡ್ ಸಂಕಷ್ಟದ ಕಾಲದಲ್ಲಿ ಕೇವಲ ಮೂರು ತಿಂಗಳ ಅಂತರದಲ್ಲಿ ನಾಗೇಶ್ ಕುಟುಂಬಕ್ಕೆ ಸುಮಾರು ೩.೫ ಲಕ್ಷ ರೂ ವೆಚ್ಚದ ಸುಂದರ ಮನೆ ನಿರ್ಮಿಸಿ ಕೊಟ್ಟಿದ್ದಾರೆ.
ಮನೆಯಲ್ಲಿರುವ ಸರಸ್ವತಿಯವರ ತಾಯಿ ಗುಲಾಬಿಯವರಿಗೆ ಬಿಲ್ಲವ ಸಮಾಜದ ಬ್ರಹ್ಮಶ್ರೀ ನಾರಾಯಣ ಗುರುವಿನ ಭಾವಚಿತ್ರ ನೀಡಿದರು. ಮೋಹನ್ ದಾಸ್ ಬಂಗೇರಾ ಅವರು ಗೆಜ್ಜೆಗಿರಿ ಕೋಟಿ-ಚೆನ್ನಯ ಮೂಲ ಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ದೇವಿದೀಪ ಕನ್ಸ್ಟ್ರಕ್ಷನ್ ಮಾಲಕರಾಗಿ ಮೋಹನದಾಸ್ ಮಾತನಾಡಿ, ”ಬಡ ಕುಟುಂಬಗಳಿಗೆ ನನ್ನ ಕೈಲಾದ ಸಹಾಯ ಮಾಡುತ್ತ ಬಂದಿದ್ದೇನೆ. ಸುಮಾರು ೧೫ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡಿದ್ದೇನೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ಜಾತಿಬೇಧ ಮರೆತು ಸುಮಾರು ೫೦೦ರಷ್ಟು ಬಡವರಿಗೆ, ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ಒದಗಿಸಿದ್ದೇನೆ. ಕೆಲವು ವರ್ಷಗಳಿಂದ ಐದು ಬಡ ಕುಟುಂಬಗಳಿಗೆ ವರ್ಷಪೂರ್ತಿ ಆಹಾರ ಸೊತ್ತು ನೀಡುತ್ತಿದ್ದೇನೆ” ಎಂದರು.
ಮನೆ ಹಸ್ತಾಂತರ ಸಂದರ್ಭದಲ್ಲಿ ಬಂಗೇರರ ಜೊತೆಯಲ್ಲಿ ಐಒಬಿ ನೌಕರ ಜನಾರ್ದನ ಸುವರ್ಣ ವಾಮಂಜೂರು, ತುಕಾರಾಮ ಮಂಗಳನಗರ, ಶಿವಾಜಿ ಬಂಗೇರ ಅಮ್ಮುಂಜೆ, ಮೇಸ್ತ್ರಿ ಸುರೇಶ್ ಶೆಟ್ಟಿ ವಾಮಂಜೂರು, ಕೆಲಸಗಾರರ ಮತ್ತಿತರರು ಇದ್ದರು.