ಕೈಕಂಬ : ಗುರುಪುರದ ಗೋಳಿದಡಿಗುತ್ತುವಿನಲ್ಲಿ ಜನವರಿ 19 ಮತ್ತು 20ರಂದು ಜರುಗಲಿರುವ `ಪರ್ಬೊದ ಸಿರಿ’, `ಗುತ್ತು ನಿಮಗೆಷ್ಟು ಗೊತ್ತು’ ಚಿಂತನ-ಮಂಥನ ವಿಚಾರಗೋಷ್ಠಿ ಹಾಗೂ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳ ನಿವೇದನಾಪತ್ರ ಹಾಗೂ ಆಮಂತ್ರಣಪತ್ರ ಬಿಡುಗಡೆ ಸಮಾರಂಭ ಭಾನುವಾರ ಗೋಳಿದಡಿಗುತ್ತು ಮನೆಯ ಆವರಣದಲ್ಲಿ ನಡೆಯಿತು.17vpgolidadiguthu

ಈ ಸಂದರ್ಭದಲ್ಲಿ ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಗುತ್ತುಗಳ ಹಿಂದಿನ ಮತ್ತು ಇಂದಿನ ಸ್ಥಿತಿಗತಿಯ ಸ್ಥೂಲ ಮಾಹಿತಿ ನೀಡುತ್ತ, ಬ್ರಿಟಿಷರ ಶೋಷಣೆಯಿಂದಾಗಿ ನಶಿಸುತ್ತ ಬಂದಿರುವ ತುಳುನಾಡ ನ್ಯಾಯತಾಣಗಳಾಗಿದ್ದ ಗುತ್ತುಗಳು ಇಂದು ಒಳರಾಜಕೀಯ ಹಾಗೂ ಕೆಲವು ಸ್ವಯಂಕೃತ ದೌರ್ಬಲ್ಯಗಳಿಂದ ಸೊರಗಿವೆ. ನ್ಯಾಯ ನಿರ್ವಹಣೆಯಾಗಬೇಕಿದ್ದ ಗುತ್ತುಗಳು ಸ್ತಬ್ಧಗೊಂಡಿವೆ. ನೂರಾರು ವರ್ಷಗಳ ಹಿಂದೆ ರಚನೆಗೊಂಡಿದ್ದ ಗುತ್ತುಗಳ ಮೂಲ ಉದ್ದೇಶ ಗುತ್ತುಗಳ ಪಡಿಯಚ್ಚಿನಿಂದ ಕಣ್ಮರೆಯಾಗಿದೆ. ದೈವಗಳ ಚಾವಡಿಯಲ್ಲೇ ಗಡಿಕಾರರು ನ್ಯಾಯದಾನ ಮಾಡುತ್ತಿದ್ದರು. ಅಂದಿನ ವ್ಯವಸ್ಥೆ ಇಂದಿಗೂ ಪ್ರಸ್ತುತ ಎಂಬ ನೆಲೆಯಲ್ಲಿ ಗುತ್ತಿನ ಮನೆಗಳು, ಬೀಡಿನ ಮನೆಗಳು, ಬಾರಿಕೆ(ಬರ್ಕೆ), ಬಾವಗಳು ಮತ್ತು ಪರಡಿಗಳ ಪುನರುತ್ಥಾನದ ಇದೊಂದು ಪ್ರಯತ್ನ ಎಂದರು.

ದೈವ-ದೇವರೇ ವ್ಯಕ್ತಿ ಯೋಗ ಮತ್ತು ಯೋಗ್ಯತೆ ಅಳೆದು ನೋಡಿ ಅವರಿಗೆ ಸೂಕ್ತ ಜವಾಬ್ದಾರಿ ನೀಡುತ್ತಾರೆ. ಗುತ್ತುಗಳ ಚರಿತ್ರೆ ಮತ್ತು ವ್ಯಾವಹಾರಿಕ ಸಂಗತಿ ತಿಳಿದುಕೊಳ್ಳಲು ಇದೊಂದು ಗಟ್ಟಿ ವೇದಿಕೆಯಾಗಬೇಕು ಎಂದು ಜಗದೀಶ ಅಧಿಕಾರಿ ಅಭಿಪ್ರಾಯಪಟ್ಟರು. ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡುತ್ತ, ತುಳುನಾಡಿನಲ್ಲಿ ಮತ್ತೆ ಗುತ್ತುಗಳ ಚಕ್ರಾಧಿಪತ್ಯ ನೆಲೆಯಾಗಬೇಕು. ಈ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದರು.

ಗಡಿಕಾರರ ಭಾವಚಿತ್ರದೊಂದಿಗೆ ವಿಳಾಸ ಸಂಗ್ರಹದ ಕೈಪಿಡಿ ತಯಾರಿಸಬೇಕು. ಇದು ಭವಿಷ್ಯದ ಪೀಳಿಗೆಗೆ ಗುತ್ತುಗಳ ಒಟ್ಟರ್ಥ ತಿಳಿದುಕೊಳ್ಳಲು ನೆರವಾಗಬಹುದು ಎಂದು ಕೃಷ್ಣ ಮಾರ್ಲ ತಿಳಿಸಿದರು.ಪ್ರಚಾರ ಸಮಿತಿ ಅಧ್ಯಕ್ಷ ದಿವಾಕರ ಸಾಮನಿ ಮಾತನಾಡುತ್ತ, ಗಡಿಕಾರರ ಹೆಸರು, ಬೀಡು ಮನೆತನಗಳ ವಿಳಾಸ ಹಾಗೂ ಇತರ ಮಾಹಿತಿ ಒಳಗೊಂಡ ಸಾಕ್ಷ್ಯಚಿತ್ರ ನಿರ್ಮಿಸಲಿದ್ದು, ಈ ಕೆಲಸದಲ್ಲಿ ಎಲ್ಲರೂ ತಮ್ಮಿಂದಾದಷ್ಟು ಮಾಹಿತಿ ಒದಗಿಸುವಂತೆ ಮನವಿ ಮಾಡಿದರು. ಗುತ್ತಿನ ಮನೆಯ ಪಕ್ಕದಲ್ಲಿರುವ ಸೊನ್ನುಕಟ್ಟೆಯಲ್ಲಿ ದೀಪ ಬೆಳಗಿಸುವುದರೊಂದಿಗೆ ನಿವೇದನಾ ಪತ್ರ ಹಾಗೂ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು. ಈ ವೇಳೆ ಗೋಳಿದಡಿಗುತ್ತಿವಿನ ಬಗ್ಗೆ 10 ನಿಮಿಷದ ಸಾಕ್ಷ್ಯಚಿತ್ರವೊಂದು ಪ್ರಸಾರವಾಯಿತು.

ವೇದಿಕೆಯಲ್ಲಿ ಏತಮೊಗರುಗುತ್ತು ಜಯಶೀಲ ಶೆಟ್ಟಿ, ಪೆರ್ಮುದೆ ಗುರುರಾಜ ಮಾಡ, ಸ್ವಾಗತ ಸಮಿತಿ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲು, ವಸಂತ್ ಕುಮಾರ್ ಅಮಾತ್ಯ, ನಂದಳಿಕೆ ಸುಹಾಸ್ ಹೆಗ್ಡೆ, ಮಾಜಿ ಮೇಯರ್ ರಜನಿ ದುಗ್ಗಣ್ಣ, ರಮಾಕಾಂತಿ ಇದ್ದರು. ಪರಮಾನಂದ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

By suddi9

Leave a Reply

Your email address will not be published. Required fields are marked *