ಕೈಕಂಬ:ಕುಪ್ಪೆಪದವು ಮಂಗಳವಾರ ರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ ಮುತ್ತೂರು ಪಂಚಾಯತ್ ವ್ಯಾಪ್ತಿಯ ಎರಡು ಮನೆಗಳಿಗೆ ಭಾರೀ ಹಾನಿಯಾಗಿದೆ. ಕುಳವೂರು ಗ್ರಾಮದ ಅಟ್ಟೆಪದವಿನ ರಾಮ ಪೂಜಾರಿ ಎಂಬವರ ಮನೆಯ ಹೆಂಚಿನ ಮನೆಗೆ ಸೇರಿಸಿ ಕಟ್ಟಿದ ಸಿಮೆಂಟ್ ಶೀಟ್‍ಗಳು ಗಾಳಿಗೆ ಹಾರಿಹೋಗಿದ್ದು, ಮನೆ ಜಖಂಗೊಂಡಿದೆ.

ಇದರಿಂದ ರಾಮ ಪೂಜಾರಿಯವರಿಗೆ ಅಂದಾಜು ಸುಮಾರು ನಾಲ್ಕೂವರೆ ಲಕ್ಷ ರೂ. ನಷ್ಟ ಉಂಟಾಗಿದೆ. ಕುಳವೂರಿನ ಬಳ್ಳಾಜೆ ಎಂಬಲ್ಲಿ ರವಿರಾಜ್ ಆಚಾರ್ಯ ಎಂಬವರ ಮನೆಯ ಮೇಲೆ ಆಲದ ಮರ ಉರುಳಿಬಿದ್ದು, ಮನೆ ಭಾಗಶಃ ಜಖಂಗೊಂಡಿದೆ. ರಾತ್ರಿ ಬೀಸಿದ ಬಿರುಗಾಳಿಯಿಂದ ಮನೆಯ ಮುಂಭಾಗದಲ್ಲಿದ್ದ ಆಲದ ಮರ ಮನೆಯ ಮೇಲೆ ಬಿದ್ದು ಹಾನಿ ಸಂಭವಿಸಿದ್ದು, ಅಂದಾಜು 60,000 ರೂ. ನಷ್ಟ ಉಂಟಾಗಿದೆ.

ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ ಪುತ್ತೂರು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸತೀಶ್ ಬಳ್ಳಾಜೆ, ಪ್ರವೀಣ್ ಆಳ್ವ, ಗುಂಡ್ಯ ಗ್ರಾಮಕರಣಿಕ ದೇವರಾಯ ಮುಂತಾದವರು ಭೇಟಿ ನೀಡಿದ್ದು, ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ.
