ಕೈಕಂಬ : ಮಳೆ-ಗಾಳಿಗೆ ಗುಡ್ಡ ಕುಸಿತ ಅಪಾಯ ಎದುರಾಗಿರುವ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ಪಡ್ಪುವಿನ ವಿಠಲ ಪೂಜಾರಿ ಹಾಗೂ ಯಮುನಾ ಪೂಜಾರ್ತಿಯವರ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಪರಿಶೀಲಿಸಿದರು.
ಮುಂದುವರಿದ ಮಳೆ-ಗಾಳಿಯಿಂದ ಮನೆಗೆ ಅಪಾಯ ಸಂಭವಿಸಲಿದ್ದು, ಮನೆಯ ಮೆಟ್ಟಿಲವರೆಗೆ ಜಾಗ ಕುಸಿದಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ನಾಯ್ಕ್ ಸೂಚಿಸಿದರು.ಗ್ರಾಮೀಣ ಭಾಗದ ಮನೆಗಳಿಗೆ ತೆರಳಿ, ಹಾನಿಯಾದ ಮನೆಗಳ ಗುರುತಿಸಿ ವರದಿ ನೀಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಶಾಸಕರು ತಿಳಿಸಿದರು. ಅಪಾಯದಲ್ಲಿರುವ ಮನೆಗಳಿಗೆ ಸರ್ಕಾರದಿಂದ ಪರಿಹಾರ ನೀಡುವ ಭರವಸೆ ನೀಡಿದರು.
ಕರಿಯಂಗಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದ್ರಾವತಿ, ತಾ.ಪಂ ಸದಸ್ಯ ಯಶವಂತ ಪೂಜಾರಿ, ಗ್ರಾ.ಪಂ ಸದಸ್ಯೆ ಶಕುಂತಳ, ಸ್ಥಳಿಯರಾದ ಸುಕೇಶ ಚೌಟ,ಪವನ್ ಕುಮಾರ್ ,ಕಿರಣ್ ಮೀಯಾಳ, ಕಾರ್ತಿಕ್ ಬಲ್ಲಾಲ್, ಪಿಡಿಒ ಪದ್ಮಾ ನಾಯಕ್, ಗ್ರಾಮ ಕರಣಿಕ ಪ್ರಶಾಂತ್, ಗ್ರಾಮ ಸಹಾಯಕ ರೂಪೇಶ್ ಮತ್ತು ವಿಶ್ವನಾಥ ಇದ್ದರು.
ಕರಿಯಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಹಾಗೂ ಅಭಿವೃದ್ಧಿ ಅಧಿಕಾರಿಗಳ ತಂಡವು ಕರಿಯಂಗಳ ಗ್ರಾಮದ ಬಡಕಬೈಲು, ಕಲ್ಲಗುಡ್ಡೆ ಅಂಗನವಾಡಿ, ಪಲ್ಲಿಪಾಡಿ, ಗುಂಡಿಕುಮೇರ್ , ಕಲ್ಕುಟ ಹಾನಿಯಾದ ಕಡೆಗಳಿಗೆ ತೆರಳಿ ಪರಿಶೀಲಿಸಿದರು.
