ಬಂಟ್ವಾಳ:ಬಂಟ್ವಾಳ -ಮೂಡುಬಿದ್ರೆ ರಸ್ತೆ ನಡುವಿನ ರಾಯಿ ಸಮೀಪದ ಬಾಜ್ರಾರ್ ಎಂಬಲ್ಲಿ ಖಾಸಗಿ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ಮೃತರನ್ನು ಉಪ್ಪಿನಂಗಡಿ ನಿವಾಸಿ ಕೃಷ್ಣಪ್ರಸಾದ್(24) ಎಂದು ಗುರುತಿಸಲಾಗಿದೆ. ಕಾರ್ಕಳದ ನಿಟ್ಟೆ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಟೆಕ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಇವರು ಎಂದಿನಂತೆ ಕಾಲೇಜಿನಿಂದ ತನ್ನ ಹೊಸ ಬೈಕಿನಲ್ಲಿ ಕುದ್ಕೋಳಿ ಜಂಕ್ಷನ್ ದಾಟಿ ರಾಯಿ ಸಮೀಪದ ಬಾಜ್ರಾರ್ರ್ ಎಂಬಲ್ಲಿ ಶುಕ್ರವಾರ ಸಂಜೆ ಬಿ.ಸಿ.ರೋಡ್ ಕಡೆಗೆ ವಾಪಾಸು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಇದೇ ರಸ್ತೆಯಲ್ಲಿ ಬಿ.ಸಿ.ರೋಡ್ನಿಂದ ಮೂಡುಬಿದ್ರೆಗೆ ಹೋಗುತ್ತಿದ್ದ ಬಲ್ಲಾಳ್ ಎಂಬ ಖಾಸಗಿ ಬಸ್ ಡಿಕ್ಕಿ ಹೊಡೆದು, ಕೃಷ್ಣಪ್ರಸಾದ್ ರಸ್ತೆಗೆ ಉರುಳಿ ಬಿದ್ದಿದ್ದಾರೆ ಎನ್ನಲಾಗಿದೆ. ಇವರು ಹೆಲ್ಮೆಟ್ ಧರಿಸಿದ್ದರೂ ಕೂಡಾ ತಲೆಗೆ ಗಂಭೀರ ಗಾಯಗೊಂಡ ಅವರನ್ನು ತಕ್ಷಣವೇ ಬಿ.ಸಿ.ರೋಡ್ ಮತ್ತು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.