ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಂಟರ ಸಂಘದ ವತಿಯಿಂದ ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಎರಡೂವರೆ ಎಕರೆ ಜಮೀನಿನಲ್ಲಿ ರೂ 10ಕೋಟಿ ವೆಚ್ಚದಲ್ಲಿ ನಿರ್ಮಣಗೊಳ್ಳಲಿರುವ ಬೃಹತ್ ‘ಬಂಟವಾಳದ ಬಂಟರ ಭವನ’ ನಿರ್ಮಾಣ ಕಾಮಗಾರಿಗೆ ಇದೇ 14ರಂದು ಬೆಳಿಗ್ಗೆ ಶಂಕು ಸ್ಥಾಪನೆ ಮತ್ತು ಬೃಹತ್ ಸಮಾವೇಶ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಹೇಳಿದ್ದಾರೆ.
ಬ್ರಹ್ಮರಕೂಟ್ಲು ರಾಷ್ಟ್ರೀಯ ಹೆದ್ದಾರಿ ಸಮೀಪದ ನೇತ್ರಾವತಿ ನದಿತೀರದಲ್ಲಿ ಇರುವ ಸಂಘದ ನಿವೇಶನದಲ್ಲಿ ಶನಿವಾರ ಗುದ್ದಲಿಪೂಜೆ ನೆರವೇರಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಸಮಾವೇಶ ಉದ್ಘಾಟಿಸಲಿದ್ದು, ಒಡಿಯೂರು ಗುರುದೇವಾನಂದ ಸ್ವಾಮೀಜಿ ‘ಬಂಟವಾಳದ ಬಂಟರ ಭವನ’ಕ್ಕೆ ಶಂಕು ಸ್ಥಾಪನೆ ನೆರವೇರಿಸುವರು.
ಕಟ್ಟಡ ಸಮಿತಿ ಗೌರವಾಧ್ಯಕ್ಷ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಕಟ್ಟಡ ಸಮಿತಿ ಅಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್, ಕಾರ್ಯಧ್ಯಕ್ಷ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮತ್ತಿತರ ಗಣ್ಯರು ಭಾಗವಹಿಸಲಿದ್ದು, ಯುವ ಭಾಗವತ ಪಟ್ಲ ಸತೀಶ ಶೆಟ್ಟಿ ನೇತೃತ್ವದಲ್ಲಿ ಯಕ್ಷಗಾನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಹಿನ್ನೆಲೆ:
ಕಳೆದ 10ವರ್ಷಗಳ ಹಿಂದೆ ಹಿರಿಯ ಕೃಷಿಕ ನಡುಮೊಗರುಗುತ್ತು ಶಿವರಾಮ ಶೆಟ್ಟಿ ನೇತೃತ್ವದಲ್ಲಿ ಸಂಘಟಕ ಕಿರಣ್ ಹೆಗ್ಡೆ ಸ್ಥಾಪಕಾಧ್ಯಕ್ಷತೆಯಲ್ಲಿ ಆರಂಭಗೊಂಡ ಇಲ್ಲಿನ ಬಂಟರ ಸಂಘವು ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ, ಬಡ ಕುಟುಂಬಗಳಿಗೆ ಆರೋಗ್ಯ ಮತ್ತು ವೈವಾಹಿಕ ಕಾರ್ಯಕ್ರಮಗಳಿಗೆ ದೇಣಿಗೆ, ಕ್ರೀಡಾಕೂಟ, ಸಾಧಕರಿಗೆ ಸನ್ಮಾನ ಮತ್ತಿತರ ಪ್ರೋತ್ಸಾಹಕ ಚಟುವಟಿಕೆ ನಡೆಸುತ್ತಿದೆ.
ವರದಕ್ಷಿಣೆ ಹತೋಟಿ:
ಬಂಟರ ಸಮಾಜದಲ್ಲಿ ವ್ಯಾಪಕವಾಗಿ ಕಾಡುತ್ತಿದ್ದ ವರದಕ್ಷಿಣೆ ಪಿಡುಗನ್ನು ನಿವಾರಿಸಲು ಸಂಘವು ಶಕ್ತಿಮೀರಿ ಶ್ರಮಿಸುತ್ತಿದ್ದು, ಬಹುತೇಕ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದೆ.
ಕನಸಿನ ಭವನ:
ಕಾಸರಗೋಡು ಮತ್ತು ಉಡುಪಿ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಗರಿಷ್ಟ ಸ್ಥಳಾವಕಾಶ ಮತ್ತು ಉತ್ಕೃಷ್ಟ ಗುಣಮಟ್ಟದಲ್ಲಿ ರೂ 10ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ಸುಸಜ್ಜಿತ ಮತ್ತು ಹವಾನಿಯಂತ್ರಿತ ‘ಬಂಟವಾಳದ ಬಂಟರ ಭವನ’ ಮುಂಬರುವ ಒಂದು ವರ್ಷದೊಳಗೆ ಸಿದ್ಧಗೊಳ್ಳಲಿದೆ. ಒಟ್ಟು 1,200 ಆಸನ ಸಾಮಥ್ರ್ಯ, 1ಸಾವಿರ ಆಸನ ಸಾಮಥ್ರ್ಯ, 500 ಆಸನ ಸಾಮಥ್ರ್ಯ, 300 ಆಸನ ಸಾಮಥ್ರ್ಯ ಹೀಗೆ ಪ್ರತ್ಯೇಕ ಬಾಲ್ಕನಿ, ಪಾರ್ಕಿಂಗ್ ಮತ್ತಿತರ ಸೌಲಭ್ಯ ಒದಗಿಸಲಾಗುತ್ತಿದೆ.
ಈ ಕನಸಿನ ಭವನ ನಿರ್ಮಾಣಕ್ಕೆ ಸಂಘದ ಮಾಜಿ ಅಧ್ಯಕ್ಷ ದಿ.ಗಂಗಾಧರ ರೈ ಬೋಳಂತೂರು ಇವರು 65 ಸೆಂಟ್ಸ್ ಜಮೀನು ಉಚಿತವಾಗಿ ನೀಡಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 5,200 ಬಂಟರ ಮನೆಗಳಿದ್ದು, ಸುಮಾರು 25ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದೆ. ಒಟ್ಟು 84 ಗ್ರಾಮಗಳಲ್ಲಿ 15ಕ್ಕೂ ಮಿಕ್ಕಿ ವಲಯ ಸಮಿತಿ ರಚಿಸಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಕಿರಣ್ ಹೆಗ್ಡೆ ಅನಂತಾಡಿ, ಲೋಕನಾಥ ಶೆಟ್ಟಿ ಬಿ.ಸಿ.ರೋಡ್, ಕಾರ್ಯದಶರ್ಿಗಳಾದ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ, ಶಶಿರಾಜ್ ಶೆಟ್ಟಿ ಕೊಳಂಬೆ, ಕೋಶಾಧಿಕಾರಿಗಳಾದ ಸದಾನಂದ ಡಿ. ಶೆಟ್ಟಿ ರಂಗೋಲಿ, ಜಗದೀಶ ಶೆಟ್ಟಿ ಇರಾಗುತ್ತು, ಜೊತೆ ಕಾರ್ಯದರ್ಶಿ ನವೀನ್ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ರೈ ಬಾಲಾಜಿಬೈಲು, ಬಾಲಕೃಷ್ಣ ಆಳ್ವ ಕೊಡಾಜೆ ಮತ್ತಿತರರು ಇದ್ದರು.