ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ರಂಗಾಯಣ ಕೇಂದ್ರವು ನಾಟಕಕಾರ ಬಿ.ವಿ.ಕಾರಂತರ ಹುಟ್ಟೂರಾದ ಮಂಚಿಯಲ್ಲಿಯೇ ಸ್ಥಾಪಿಸಿದರೆ ಅದು ನಿಜಕ್ಕೂ ಅರ್ಥಪೂರ್ಣವಾಗಲಿದೆ ಎಂದು ಮಂಗಳೂರು ಆಕಾಶವಾಣಿ ಸಹಾಯಕ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಅವರು ಹೇಳಿದರು.
ತಾಲ್ಲೂಕಿನ ಮಂಚಿ ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್ ವತಿಯಿಂದ ಮಂಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಾತ್ರಿ ಆರಂಭಗೊಂಡ ಮೂರು ದಿನಗಳ ಬಿ.ವಿ.ಕಾರಂತ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮೈಸೂರು, ಧಾರಾವಾಡ, ಗುಲ್ಬರ್ಗದಲ್ಲಿ ಕಾರಂತರ ಪರಿಕಲ್ಪನೆಯಂತೆ ರಂಗಾಯಣ ಹುಟ್ಟಿಕೊಂಡಿದ್ದು, ಈ ಜಿಲ್ಲೆಯ ರಂಗಾಯಣ ಅವರ ಹುಟ್ಟೂರಿನಲ್ಲಿ ಸ್ಥಾಪಿಸುವುದು ಅಗತ್ಯವಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ಒತ್ತಡ ಹೇರುವ ಪ್ರಯತ್ನವನ್ನು ಜಿಲ್ಲೆಯ ಶಾಸಕರು ಮತ್ತು ಸಚಿವರು ಮಾಡಬೇಕು ಎಂದರು.
ವಿಟ್ಲ ಕನ್ನಡ ಸಂಘದ ಅಧ್ಯಕ್ಷ ಅನಂತಕೃಷ್ಣ ಹೆಬ್ಬಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮೈಸೂರು ರಂಗಾಯಣ ಹಿರಿಯ ಕಲಾವಿದ ಕೃಷ್ಣ ಕುಮಾರ ನಾರ್ಣಕಜೆ, ಹಿರಿಯ ಕಲಾವಿದ ಮಹಾಬಲೇಶ್ವರ ಹೆಬ್ಬಾರ್, ಜೋಡುಮಾರ್ಗ ಅಭಿರುಚಿ ಅಧ್ಯಕ್ಷ ಪ್ರೊ.ಎ.ಪಿ.ರಾವ್, ಕಲಾವಿದ ಗೋಪಾಲ ಅಂಚನ್, ಪ್ರಮುಖರಾದ ಬಿ.ಚಂದ್ರಶೇಖರ್ ರಾವ್, ಶಾರದಾ ಎಸ್.ರಾವ್ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟ್ನ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಕೆ.ಗಣೇಶ್ ಐತಾಳ್ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಎಂ.ಉಮಾನಾಥ ರೈ ವಂದಿಸಿದರು. ಜೊತೆ ಕಾರ್ಯದರ್ಶಿ ಎನ್.ರಮಾನಂದ ಕಾರ್ಯಕ್ರಮ ನಿರೂಪಿಸಿದರು.
ನಾಟಕ ಪ್ರದರ್ಶನ:
ಇದೇ ವೇಳೆ ಮೈಸೂರು ರಂಗಾಯಣದ ಕಿರಿಯ ಕಲಾವಿದರಿಂದ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರ ‘ಬೆಪ್ತಕ್ಕಡಿ ಬೋಳೇಶಂಕರ’ ನಾಟಕ ಪ್ರದರ್ಶ ನಗೊಂಡಿತು.