ಮೂಡುಬಿದಿರೆ:ಕೊಣಾಜೆಕಲ್ಲು ಪರಿಸರದಲ್ಲಿ ಕಾಡುಕೋಣಗಳ ಹಾವಳಿಯಿಂದ ಬೆಳೆ ನಾಶವಾಗಿದೆ, ಆಗಾಗ್ಗೆ ಚಿರತೆಗಳು ಕಾಣಸಿಗುತ್ತಿದ್ದು ಸ್ಥಳೀಯರು ತಿರುಗಾಡಲು ಭಯಪಡುತ್ತಿದ್ದಾರೆ. ಬೆಳೆ ಹಾನಿಗೆ ಪರಿಹಾರ ಮತ್ತು ಭವಿಷ್ಯದಲ್ಲಿ ಕಾಡುಪ್ರಾಣಿಗಳ ಹಾವಳಿ ತಡೆಗೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಶಿರ್ತಾಡಿ ಪಂ. ಗ್ರಾಮ ಸಭೆ ಪಂಚಾಯತಿ ಅಧ್ಯಕ್ಷೆ ಲತಾ ಹೆಗ್ಡೆ ಅಧ್ಯಕ್ಷತೆಯಲ್ಲಿ ಗುರುವಾರ ನಡೆಯಿತು. ಗ್ರಾಮಸ್ಥರ ದೂರಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಸಿಬಂದಿ ಬೆಳೆ ಹಾನಿಗೆ ಪರಿಹಾರ ನೀಡಬಹುದು ಆದರೆ ಕಾಡುಪ್ರಾಣಿಗಳು ಕೃಷಿ ಪ್ರದೇಶಕ್ಕೆ ಬರದಂತೆ ತಡೆಯುವುದಕ್ಕೆ ಸಧ್ಯ ಇಲಾಖೆಯಿಂದ ಯಾವುದೇ ಕ್ರಮ ಇಲ್ಲ ಎಂದರು.
ಮೀಸಲು ಅರಣ್ಯ ಗೊಂದಲಕ್ಕೆ ಗ್ರಾಮಕರಣಿಕರೆ ಹೊಣೆ: ಶಿರ್ತಾಡಿಯ ಎಲ್ಲ ಸರಕಾರಿ ಜಾಗವನ್ನು ಮೀಸಲು ಅರಣ್ಯ ಪ್ರದೇಶವೆಂದು ಕಛೇರಿಯಲ್ಲೆ ಕುಳಿತು ಗ್ರಾಮಕರಣಿಕರು ವರದಿ ತಯಾರಿಸಿ ಮೇಲಾಧಿಕಾರಿಗೆ ಸಲ್ಲಿಸಿದ ಪರಿಣಾಮ ಇಲ್ಲಿ ಸ್ಮಶಾನಕ್ಕೆ ಭೂಮಿ ಇಲ್ಲ, ಬಡವರಿಗೆ ನಿವೇಶನ ಹಂಚಲಾಗುತ್ತಿಲ್ಲ, ತ್ಯಾಜ್ಯ ನಿರ್ವಹಣೆಗೆ ಭೂಮಿ ಕಾದಿರಿಸಲು ಸಾಧ್ಯವಾಗುತ್ತಿಲ್ಲ. ಈ ಎಲ್ಲ ಗೊಂದಲಕ್ಕೆ ಗ್ರಾಮಕರಣಿಕರೆ ಹೊಣೆ. ನೀವು ಸ್ಥಳ ಪರಿಶೀಲನೆ ನಡೆಸದೆ ಮಾಡಿದ ತಪ್ಪು ಕೆಲಸದಿಂದ ಶಿರ್ತಾಡಿಯ ಜನ ತೊಂದರೆ ಅನುಭವಿಸುವಂತಾಗಿದೆ ಎಂದು ಸುಕೇಶ್ ಶೆಟ್ಟಿ ಗ್ರಾಮರಕರಣಿಕರನ್ನು ತರಾಟೆಗೆ ತೆಗೆದುಕೊಂಡರು.
ಗಂಟಾಲ್ಕಟ್ಟೆ ಪರಿಸರದಲ್ಲಿ ಗೋವಧೆ ಮಾಡಿ ಅದರ ತ್ಯಾಜ್ಯವನ್ನು ಪಡುಕೊಣಾಜೆ ಹೊಳೆಗೆ ಎಸೆಯಲಾಗುತ್ತಿದೆ , ಸೆಲೂನಿನಲ್ಲಿ ಕ್ಷೌರ ಮಾಡಿದ ತಲೆಕೂದಲುಗಳನ್ನು ಕೂಡ ಹೊಳೆಗೆ ಬಿಡಲಾಗುತ್ತಿದೆ ಇಂತಹ ಕೃತ್ಯ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪಂಚಾಯತಿ ಆಡಳಿತವನ್ನು ಒತ್ತಾಯಿಸಿದರು. ಶಿರ್ತಾಡಿಗೆ ಕಾಯಂ ಗ್ರಾಮಕರಣಿಕರು ಹಾಗೂ ಇಬ್ಬರು ಲೇನ್ಮೇನ್ಗಳು ಬೇಕು ಎಂದು ಸದಸ್ಯ ಪ್ರವಿಣ್ ಕುಮಾರ್ ಜೈನ್ ಆಗ್ರಹಿಸಿದರು. .