ಬಂಟ್ವಾಳ: ಶ್ರೀ ರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಶ್ರೀ ಶಾರದಾ ಭಜನಾ ಮಂದಿರ ವೀರಕಂಭ ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ವೀರಕಂಭ ಇದರ ವತಿಯಿಂದ 11ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮವು ಪುರೋಹಿತರಾದ ಕುಶೆಕೋಡಿ ಕಾರ್ತಿಕ್ ಭಟ್ ಇವರ ಪೌರೋಹಿತ್ಯದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷೆ, ಗ್ರಾಮ ಪಂಚಾಯತ್ ಸದಸ್ಯೆಯಾದ ಶ್ರೀಮತಿ ಜಯಂತಿ ಜನಾರ್ಧನರವರು ಅಧ್ಯಕ್ಷ ಸ್ಥಾನದಲ್ಲಿ ವರಮಹಾಲಕ್ಷ್ಮೀ ವೃತಾಚರಣೆಯು ಜಗನ್ಮಾತೆಯನ್ನು ಆವಾಹನೆ ಮಾಡುವುದು. ನಿಯಮ ಪಾಲನೆಯಿಂದ ವೃತವನ್ನು ಆಚರಿಸಿ ಆರಾಧಿಸಿದ್ದೆ ಆಗಿದ್ದಲ್ಲಿ ಫಲವು ಅಭೀಷ್ಟವಾಗುವುದೆಂದು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು.
ಶ್ರೀ ರಾಮ ವಿದ್ಯಾಕೇಂದ್ರದ ಮಾತಾಜಿಯವರಾದ ಶ್ರೀಮತಿ ಪ್ರೇಮರವರು ಧಾರ್ಮಿಕ ಆಚಾರ ವಿಚಾರಗಳು ಮನುಷ್ಯನನ್ನು ದೈವತ್ವಕ್ಕೆ ಕೊಂಡೊಯ್ಯುತ್ತದೆ. ವೃತಗಳಿಂದ ಭಗವಂತನ ಸಾನಿಧ್ಯದಲ್ಲಿದ್ದು ನಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸುತ್ತದೆ. ಹಬ್ಬ ಹರಿದಿನಗಳ ಹಿನ್ನಲೆಯನ್ನು ತಿಳಿದು ಆಚರಿಸುವುದರಿಂದ ಆಯಾ ಪರ್ವಗಳ ವಿಶೇಷತೆ ಹಾಗೂ ಸಾಂಸ್ಖøತಿಕ, ಧಾರ್ಮಿಕ ನಡಾವಳಿಗಳು ಅಭಿವೃದ್ಧಿಯನ್ನುಂಟು ಮಾಡುತ್ತವೆ. ಶಾಸ್ತ್ರ ಸಂಪ್ರದಾಯಗಳು ಸಿದ್ಧಿಯನ್ನುಂಟು ಮಾಡುವುದು, ಶ್ರೀವರಮಹಾಲಕ್ಷ್ಮೀ ವೃತಾಚರಣೆಯು ನಿತ್ಯ ವೃತಗಳಲ್ಲಿ ಸೇರಿಲ್ಲವಾದರೂ ಜಗನ್ಮಾತೆಯು ಪ್ರಸನ್ನತೆಗೋಸ್ಕರ ಇದನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸುವುದು ಅವಶ್ಯಕವಾಗಿದೆ. ಅದೇ ರೀತಿ ರಕ್ಷಾಬಂಧನವು ಸಹೋದರತೆಯ ಸಂಕೇತ. ಸಹೋದರತ್ವದ ಉತ್ತಮ ಸಂಬಂಧಗಳು ದೇಶಕ್ಕೆ ಒಳಿತು ಉಂಟುಮಾಡುವುದು, ಪರಸ್ಪರ ಪ್ರೀತಿ ಸ್ನೇಹ-ನಂಬಿಕೆಗಳಿಂದ ಮಾತ್ರವೇ ಮುನ್ನಡೆಗೆ ಸಾಧ್ಯವಾಗುವುದು ಎಂಬುದಾಗಿ ತಮ್ಮ ಧಾರ್ಮಿಕ ಉಪನ್ಯಾಸದಲ್ಲಿ ತಿಳಿಸಿದರು.
ಶ್ರೀಮತಿ ಪ್ರೇಮ ನಾಗೇಶ್ ಆಚಾರ್ಯರವರು ಪ್ರಾರ್ಥಿಸಿ, ಶ್ರೀಮತಿ ಶಶಿಕಲಾ ಸ್ವಾಗತಿಸಿದರು. ಶ್ರೀಮತಿ ಸಂಗೀತಾ ಧನ್ಯವಾದವಿತ್ತು, ಶ್ರೀಮತಿ ಜಯಂತಿ ಜನಾರ್ಧನರವರು ಕಾರ್ಯಕ್ರಮ ನಿರ್ವಹಿಸಿದರು. ತದನಂತರದಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.