ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ನವರಾತ್ರಿ ಮಹೋತ್ಸವದ ಸಂದರ್ಭ ಸೋಮವಾರ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಐದು ವರ್ಷದೊಳಗಿನ ಕುಮಾರಿಯೊಬ್ಬಳಿಗೆ ಕಾಳರಾತ್ರಿ ಪೂಜೆ ನೆರವೇರಿಸಿದರು. ಮಕ್ಕಳಲ್ಲಿ ದೇವರನ್ನು ಕಾಣುವ ಸ್ವಾಮೀಜಿ ನವರಾತ್ರಿ ಸಂದರ್ಭ ಬೆಳಗ್ಗೆ ತಪೋವನದಲ್ಲಿ ನವದುರ್ಗೆಯರ ಒಂದೊಂದು ರೂಪಕ್ಕೆ ಕುಮಾರಿಯವರನ್ನು ಅಲಂಕರಿಸಿ ಶೈಲಪುತ್ರಿ 2.ಬ್ರಹ್ಮಚಾರಿಣಿ, 3.ಚಂದ್ರಘಂಟ, 4.ಕೂಷ್ಮಾಂಡ, 5.ಸ್ಕಂದಮಾತಾ, 6.ಕಾತ್ಯಾಯಿನಿ, 7.ಕಾಳರಾತ್ರಿ, 8.ಮಹಾಗೌರಿ, 9.ಸಿದ್ದಿಧಾತ್ರಿ ಹೀಗೆ ಒಂಬತ್ತು ಕುಮಾರಿಯರನ್ನು ದುರ್ಗೆಯ ರೂಪದಲ್ಲಿ ಅಲಂಕರಿಸಿ ಪೂಜೆ ನಡೆಸುವುದನ್ನು ಐದು ವರ್ಷಗಳಿಂದ ಅನುಷ್ಠಾನಕ್ಕೆ ತಂದಿದ್ದಾರೆ.
ಮಕ್ಕಳಲ್ಲಿ ದೇವರನ್ನು ಕಾಣುವ ಮನೋಭಾವದ ಸ್ವಾಮೀಜಿ ಮಕ್ಕಳ ವಿದ್ಯಾಭ್ಯಾಸ, ನೃತ್ಯ, ಸಂಗೀತ ಮತ್ತಿತರ ಕಲಾಸಾಂಸ್ಕ್ರತಿಕ ಕಲಿಕೆಗೆ ಧಾರಾಳವಾಗಿ ಪ್ರೋತ್ಸಾಹಿಸುತ್ತ ಬರುತ್ತಿದ್ದಾರೆ. ಮಠದಲ್ಲಿ ಹೆತ್ತವರು ವರ್ಷದ ಪೂಜೆಗೆ ತಮ್ಮ ಮಗುವಿನ ಹೆಸರನ್ನು ನೋಂದಾಯಿಸುತ್ತಾರೆ.


ಯಾವ ದಿನ ಯಾವ ಮಗುವಿಗೆ ಪೂಜೆ ಎನ್ನುವುದನ್ನು ಸ್ವಾಮೀಜಿ ಸೂಚಿಸಿರುತ್ತಾರೆ. ಆ ದಿನ ಆ ಮಗುವಿನ ಪೋಷಕರು ತಮ್ಮ ಮಗುವನ್ನು ಆಶ್ರಮಕ್ಕೆ ಕರೆತಂದು ದೇವಿಯ ಅಲಂಕಾರ ನೆರವೇರಿಸುತ್ತಾರೆ. ಹತ್ತೂವರೆ ವೇಳೆಗೆ ಅಲಂಕೃತ ಮಗುವಿಗೆ ಪೂಜೆ ಆರಂಭಿಸುತ್ತಾರೆ. ಮಂತ್ರ ಪಠಣದ ಜತೆಗೆ ಪುಷ್ಪಾರ್ಚನೆ ನೆರವೇರಿಸುತ್ತಾರೆ.
ನಾನಾ ಪೂಜಾ ವಿಧಿಗಳನ್ನು ಪೂರೈಸಿದ ಬಳಿಕ ಸರಿಯಾಗಿ 12ಗಂಟೆಗೆ ಮಹಾಪೂಜೆ ನರವೇರಿಸುತ್ತಾರೆ. ಮಗುವಿಗೆ ಪ್ರದಕ್ಷಿಣೆ ಬರುತ್ತಾರೆ ಕೊನೆಯದಾಗಿ ಉದ್ದಂಡ ನಮಸ್ಕಾರವನ್ನು ಮಾಡುತ್ತಾರೆ.
ಒಂಬತ್ತನೇ ದಿನ ಈ ಒಂಬತ್ತೂ ಮಂದಿ ಬಾಲಕಿಯರನ್ನು ಜತೆಯಾಗಿ ಕುಳ್ಳಿರಿಸಿ ಪೂಜೆ ಸಲ್ಲಿಸುತ್ತಾರೆ.