ಬಂಟ್ವಾಳ: ಕ್ಷೇತ್ರ ಪುನರ್ವಿಂಗಡನೆಯ ಪ್ರತಿಫಲವಾಗಿ ಜನ್ಮ ತಳೆದ ಹೊಸ ಜಿಲ್ಲಾ ಪಂಚಾಯಿತಿ ಕ್ಷೇತ್ರ ಸಜೀಪಮುನ್ನೂರು ತಾಲೂಕಿನಲ್ಲಿಯೇ ಅತೀ ಹೆಚ್ಚು ಕುತೂಹಲಕೆರಳಿಸಿರುವ ಕಣ. ಈ ಹಿಂದೆ ತುಂಬೆ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಬಹುತೇಕ ಗ್ರಾಮಗಳು ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಸಜೀಪಮುನ್ನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸೇರಿಕೊಂಡಿದ್ದು, ಘಟಾನುಘಟಿಗಳ ಸ್ಪರ್ಧೆ ಇಲ್ಲಿನ ವಿಶೇಷ.

ಈ ಹಿಂದೆ ಗ್ರಾಮಮಂಚಾಯತ್ ಸದಸ್ಯ, ಅಧ್ಯಕ್ಷ,, ತಾಲೂಕು ಪಂಚಾಯತ್ಸದಸ್ಯ ಅಧ್ಯಕ್ಷ, ಜಿ.ಪಂ.ಸದಸ್ಯರಾಗಿ ಬಳಿಕ ವಿಟ್ಲ ಕ್ಷೇತ್ರದ ಶಾಸಕರಾಗಿ ಒಂದು ಅವಧಿಯಲ್ಲಿ ಕಾರ್ಯನಿರ್ವಹಿಸಿದ ಪದ್ಮನಾಭ ಕೊಟ್ಟಾರಿಯವರು ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದರೆ, ಕಳೆದ ಜಿ.ಪಂ. ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯಾಗಿದ್ದ ಗೋಳ್ತಮಜಲು ಜಿ.ಪಂ. ಕ್ಷೇತ್ರದಲ್ಲಿ ಜಯಭೇರಿ ಸಾಧಿಸಿದ್ದ , ಸಚಿವ ರೈ ಯವರ ಪರಮಾಪ್ತ ಚಂದ್ರಪ್ರಕಾಶ ಶೆಟ್ಟಿಯವರು ಇಲ್ಲಿನ ಕಾಂಗ್ರೇಸ್ ಅಭ್ಯರ್ಥಿ . ಉಳಿದಂತೆ ಕಳೆದ ಬಂಟ್ವಾಳ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಯಿಂದ ಸ್ಪರ್ಧೆ ಮಾಡಿದ್ದ ಇಬ್ರಾಹಿಂ ಕೈಲಾರ್ ಇದೇ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸಂಪರ್ಧಿಸಲಿದ್ದಾರೆ. ಹಂಝ ಎಂಬವರು ಎಸ್ಡಿಪಿಐ ನಿಂದ , ರೈತ ಸಂಘದಿಂದ ಶರತ್ ಕುಮಾರ್ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಶಶಿಕಿರಣ್ ಎಂಬವರೂ ಈ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಫರ್ಧಿ ಸಲು ನಾಮಪತ್ರ ಸಲ್ಲಿಸಿದ್ದಾರೆ.
ಕ್ಷೇತ್ರದ ಸುತ್ತಮುತ್ತ..
ಸಜೀಪಮುನ್ನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿ ವಿಶಾಲವಾಗಿದೆ. ಸಜೀಪಮುನ್ನೂರು ಹಾಗೂ ಸಜೀಪಮೂಡ ಗ್ರಾಮಗಳು ಒಂದು ಭಾಗದಲ್ಲಿದ್ದರೆ, ಕರಿಯಂಗಳ ಬಡಗಬೆಳ್ಳೂರು, ತೆಂಕಬೆಳ್ಳೂರು ಹಾಗೂ ಅಮ್ಮುಂಜೆ ಗ್ರಾಮಗಳು ಇನ್ನೊಂದು ಭಾಗದಲ್ಲಿದೆ. ಕಳ್ಳಿಗೆ, ಅಮ್ಟಾಡಿ ಹಾಗೂ ಕುರಿಯಾಳ ಗ್ರಾಮಗಳು ಪ್ರತ್ಯೇಕ ಮಗ್ಗುಲಲ್ಲಿದೆ.
ಪುರಾಣ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಕ್ಷೇತ್ರ, ಇತಿಹಾಸ ಪ್ರಸಿದ್ದ ನಂದಾವರ ವಿನಾಯಕ ಶಂಕರನಾರಯಾಣ ದುಗರ್ಾಂಬಾ ಕ್ಷೇತ್ರ, ಕಾರಣಿಕ ಕ್ಷೇತ್ರ ಪಣೋಲಿಬೈಲು ಸೇರಿದಂತೆ ಪ್ರಮುಖ ಧಾರ್ಮಿಕ ಶ್ರದ್ಧಾಕೇಂದ್ರಗಳು ಸಜೀಪಮುನ್ನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯನ್ನು ಒಳಗೊಂಡಿದೆ.
ಪ್ರಮುಖ ರಸ್ತೆಗಳು ಅಭಿವೃದ್ದಿ ಕಂಡಿವೆಯಾದರೂ ಗ್ರಾಮೀಣ ಭಾಗದ ಒಳರಸ್ತೆಗಳಿಗೆ ಕಾಯಕಲ್ಪ ಸಿಗಬೇಕಾಗಿದೆ. ಕರಿಯಂಗಳ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆಗಳು ಇನ್ನೂ ಮೇಲ್ದರ್ಜೆಗೇರದೆ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ. ನೇತ್ರಾವತಿ ಹಾಗೂ ಫಲ್ಗುಣಿ ನದಿಗಳು ಈ ಜಿಲ್ಲಾಪಂಚಾಯಿತಿ ಕ್ಷೇತ್ರಕ್ಕೆ ಒಳಪಟ್ಟಿದ್ದರೂ ಕುಡಿಯುವ ನೀರಿನ ಸಮಸ್ಯೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿದೆ. ಸಜೀಪಮುನ್ನೂರು ಬಹುಗ್ರಾಮ ಯೋಜನೆ ಅನುಷ್ಠಾನಗೊಂಡಲ್ಲಿ ಸಜೀಪಮುನ್ನೂರು ಹಾಗೂ ಸಜೀಪಮೂಡ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಲಭ್ಯವಾಗಲಿದೆ. ಸಂಗಬೆಟ್ಟು ಯೋಜನೆಯ ಮೂಲಕ ಅಮ್ಟಾಡಿ ಹಾಗೂ ಕುರಿಯಾಳ ಗ್ರಾಮಗಳಿಗೆ ನೀರು ದೊರೆಯಲಿದೆ. ಉಳಿದಂತೆ ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು, ಅಮ್ಮುಂಜೆ ಗ್ರಾಮಗಳಿಗೆ ಶಾಶ್ವತ ನೀರಾವರಿಗಾಗಿ ಯೋಜನೆ ರೂಪಿಸಬೇಕಾಗಿದೆ. ಏತನೀರಾವರಿ ಯೋಜನೆಯ ಮೂಲಕ ಸಜೀಪಮೂಡ ಹಾಗೂ ಸಜೀಪಮುನ್ನೂರು ಗ್ರಾಮಗಳಮ ಕೃಷಿ ಭೂಮಿಗೆ ನೀರು ಒದಗಿಸುವ ಯೋಜನೆಗೆ ಚಾಲನೆ ಸಿಕ್ಕಿದೆ.
ಸಜೀಪಮುನ್ನೂರು ಕ್ಷೇತ್ರದ ಮೀಸಲಾತಿ ಸಾಮಾನ್ಯವಾಗಿದ್ದರೂ, ಇಲ್ಲಿನ ಸ್ಪರ್ಧೆ ಸಾಮಾನ್ಯವಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಒಟ್ಟಿನಲ್ಲಿ ಈ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮೂಡಿ ಬರಲಿದೆ.
ಒಳಪಡುವ ಗ್ರಾಮಗಳು:
ಸಜೀಪಮುನ್ನೂರು, ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು, ಅಮ್ಮುಂಜೆ, ಕಳ್ಳಿಗೆ, ಸಜೀಪಮೂಡ, ಅಮ್ಟಾಡಿ, ಕುರಿಯಾಳ.
ತಾಲೂಕು ಪಂಚಾಯಿತಿ ಕ್ಷೇತ್ರಗಳು:
ಸಜೀಪಮುನ್ನೂರು, ಕರಿಯಂಗಳ, ಅಮ್ಮುಂಜೆ, ಸಜೀಪಮೂಡ, ಅಮ್ಟಾಡಿ
ಒಟ್ಟು ಜನಸಂಖ್ಯೆ: 43495
ಮೀಸಲಾತಿ: ಸಾಮಾನ್ಯ