
ಕಲಬುರಗಿ: ಪ್ರತ್ಯೇಕ ಲಿಂಗಾಯತ ಧರ್ಮದ ಪರ ಒಲವು ತೋರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯರು ಭಗವತ್ಪಾದರು ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ತಯಾರಿಸಿದ ವರದಿಯನ್ನು ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಬಾರದು ಎಂದು ಒತ್ತಾಯಿಸಿದ್ದಾರೆ.
ಹಠಮಾರಿತನದಿಂದ ಒಂದು ವೇಳೆ ಸಚಿವರ ಮಾತನ್ನು ಕೇಳಿ ಮುಖ್ಯಮಂತ್ರಿ ಮುಂದುವರಿದರೆ ಚುನಾವಣೆ ಸಮಯದಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಧರ್ಮದಲ್ಲಿ ಒಡಕು- ವೈಮನಸ್ಸು ಉಂಟುಮಾಡುವಂಥದ್ದು ರಾಜಕೀಯ ಅಧಿಕಾರ ಸೂತ್ರದ ಒಂದು ಗುಣಧರ್ಮವಾಗಿದ್ದರೆ ಅದನ್ನು ಬಿಡಬೇಕು. ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ಅರಿತು ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ಅದನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ.
ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧ:
ರಾಜ್ಯ ಸರ್ಕಾರ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧವಿರುವುದಾಗಿ ತಿಳಿಸಿದ ರಂಭಾಪುರಿ ಶ್ರೀ, ಅಗತ್ಯ ದಾಖಲೆಗಳನ್ನು ಕೋರ್ಟ ವಿಚಾರಣೆ ವೇಳೆ ಹಾಜರುಪಡಿಸುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ವೀರಶೈವ ಮಠಾಧೀಶರ ಪರಿಷತ್ ನ್ನು ಹುಟ್ಟುಹಾಕಲಾಗಿದ್ದು, ಆ ಮೂಲಕ ನಾಡಿನ ಎಲ್ಲ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಜನರನ್ನು ಜಾಗೃತಿ ಉಂಟು ಮಾಡುವ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಚುನಾವಣೆಯಲ್ಲಿ ಪಾಠ ಕಲಿಸುವುದು ನಿಶ್ಚಿತ:
ಪ್ರತ್ಯೇಕ ಲಿಂಗಾಯತ ಧರ್ಮದ ಪರ ಕೇಂದ್ರಕ್ಕೆ ರಾಜ್ಯ ಸರ್ಕಾರ ವರದಿ ಶಿಫಾರಸ್ಸು ಮಾಡಿದರೆ ಅಖಿಲ ಭಾರತ ವೀರಶೈವ ಮಹಾಸಭೆಯ ಪ್ರಮುಖ ಶಾಮನೂರು ಶಿವಶಂಕರಪ್ಪನವರು ಪಕ್ಷಕ್ಕೆ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ. ಅಂಥವರ ಮಾತನ್ನು ನಿರ್ಲಕ್ಷ ಮಾಡಿದ್ದಾದರೆ ಅದರ ಪ್ರತಿಫಲ ನಾವು ಈಗ ಹೇಳುವುದಿಲ್ಲ. ಸ್ವಲ್ಪವೇ ದಿನಗಳಲ್ಲಿ ಬರಲಿರುವ ಚುನಾವಣೆಯಲ್ಲಿ ಜನರ ಮೂಲಕ ತಕ್ಕ ಪಾಠ ಕಲಿಸಿಯೇ ಕಲಿಸುತ್ತೇವೆ ಎಂದು ರಂಭಾಪುರ ಶ್ರೀ ಎಚ್ಚರಿಕೆ ನೀಡಿದ್ದಾರೆ.